ಸೋಮವಾರಪೇಟೆ, ಏ. ೬: ಗ್ರಾಮೀಣ ಪ್ರದೇಶದ ಜನಪದದ ಪ್ರಮುಖ ಅಂಗವಾದ ಸುಗ್ಗಿ ಹಬ್ಬಕ್ಕೆ ಉತ್ತರ ಕೊಡಗಿನ ಮಲೆನಾಡು ಮಂದಿ ತಯಾರಿ ಆರಂಭಿಸಿದ್ದಾರೆ. ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುವ ಸುಗ್ಗಿ ಹಬ್ಬ ಕೆಲವೇ ದಿನಗಳಲ್ಲಿ ಎದುರಾಗುತ್ತಿದ್ದು, ರೈತಾಪಿ ವರ್ಗ ಗ್ರಾಮ ದೇವತೆಯ ಆರಾಧನೆಗೆ ಸಿದ್ಧತೆ ಕೈಗೊಳ್ಳುತ್ತಿದೆ.
ಇನ್ನೇನು ಕೆಲ ಸಮಯದಲ್ಲೇ ಮಳೆಗಾಲ ಆರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯ ಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಳ್ಳುವ ಸಮಯ ಸನ್ನಿಹಿತವಾಗುತ್ತಿರುವಾಗಲೇ ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು, ಗ್ರಾಮ ಸುಭೀಕ್ಷೆಯಿಂದಿರಬೇಕು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮ ದೇವರಿಗೆ ಹಾಗೂ ಪ್ರಕೃತಿದೇವಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶಿಷ್ಟ ಹಬ್ಬವಾದ ಸುಗ್ಗಿ ಉತ್ಸವಗಳು ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿಗೆ ಒಳಪಡುವ ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ಧಾಭಕ್ತಿಯಿಂದ ಇಂದಿಗೂ ಜರುಗುತ್ತಿವೆ.
ಮಲೆನಾಡಿನ ಪ್ರದೇಶವಾದ ಪುಷ್ಪಗಿರಿ ಬೆಟ್ಟಶ್ರೇಣಿಯ ತಪ್ಪಲಲ್ಲಿರುವ ಗ್ರಾಮಗಳಲ್ಲಿ ಇನ್ನೇನು ಕೆಲದಿನಗಳಲ್ಲಿ (ಏಪ್ರಿಲ್ ಕೊನೆಯ ವಾರ ಮತ್ತು ಮೇ) ಸುಗ್ಗಿ ಹಬ್ಬ ಪ್ರಾರಂಭವಾಗಲಿದೆ. ಈ ವ್ಯಾಪ್ತಿಯ ಗ್ರಾಮಗಳ ಗ್ರಾಮದೇವರಾದ ಸಬ್ಬಮ್ಮ ದೇವಿಗೆ ಊರಿನ ಎಲ್ಲರೂ ಒಟ್ಟುಸೇರಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಆಚರಣೆ ತಲೆತಲಾಂತರದಿAದ ನಡೆದುಕೊಂಡು ಬಂದಿದೆ.
ಸುಗ್ಗಿ ಉತ್ಸವ ಪ್ರಾರಂಭವಾಗು ತ್ತಿದ್ದಂತೆ ಗ್ರಾಮದ ಜನರ ಮನೆಗಳಲ್ಲಿ ಗ್ರಾಮದೇವತೆಗಳ ಪೂಜೆಗಳು ನಡೆಯುತ್ತವೆ. ಗ್ರಾಮದಲ್ಲಿ ರೋಗರುಜಿನಗಳು ಬಾರದಂತೆ, ಮುಂದೆ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ನಡೆದು ಸಮೃದ್ಧ ಫಸಲು ಕೈಸೇರುವುದಕ್ಕೆ ಗ್ರಾಮದೇವತೆಗಳು ಹರಸಬೇಕೆಂದು ಪ್ರಾರ್ಥನೆ ಮಾಡುತ್ತಾರೆ. ಸುಗ್ಗಿ ಉತ್ಸವ ಪ್ರಾರಂಭದ ದಿನದಿಂದ ‘ಸುಗ್ಗಿ ಸಾರು’ ಎಂಬ ಕಟ್ಟುನಿಟ್ಟಿನ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ಉತ್ಸವದ ೧೫ ದಿನಗಳಲ್ಲಿ ಹಸಿ ಮರ ಕಡಿಯುವುದು, ಒಣಗಿದ ಗಿಡ ಬಳ್ಳಿಗಳನ್ನು ಮುರಿಯದಂತೆ ಎಚ್ಚರ ವಹಿಸುತ್ತಾರೆ.
ಹಗಲು ವೇಳೆ ನೆಂಟರಿಷ್ಟರು ಮನೆ ಸೇರದಂತೆ ನಿರ್ಬಂಧ ವಿಧಿಸುತ್ತಾರೆ. ನಕ್ಷತ್ರಗಳು ಕಂಡ ನಂತರವೇ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಹಗಲಿನ ವೇಳೆ ಹೊರಗಡೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವಂತಿಲ್ಲ. ಇಂತಹ ಕಟ್ಟುಪಾಡುಗಳು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸುಗ್ಗಿ ಸಂದರ್ಭ ಚಾಲ್ತಿಯಲ್ಲಿರುತ್ತವೆ.
ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ (ಲಕ್ಷಿö್ಮÃ) ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಹಲವು ವೈಶಿಷ್ಟö್ಯಗಳೊಂದಿಗೆ ನೆರವೇರುತ್ತದೆ.
ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಪಕ್ಕದ ಸಕಲೇಶಪುರ ತಾಲೂಕಿನ ಓಡಳ್ಳಿ ಸೇರಿದಂತೆ ಒಟ್ಟು ೧೮ ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿಕಾಲದಿಂದ ನಡೆದುಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.
ಉತ್ಸವದ ಕೊನೆ ದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ ೪ ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದದ ಭಾಗವಂತೂ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ಪ್ರಕಟಗೊಳಿಸುವ ಬಹುಮುಖ್ಯ ಕ್ಷಣಗಳಾಗುತ್ತವೆ.
ಇದರೊಂದಿಗೆ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಕೂಡ ಈ ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಸುಗ್ಗಿ ಉತ್ಸವವಾಗಿದೆ. ಬೀರೇದೇವರ ಹಬ್ಬ ಆಚರಣೆ ಯೊಂದಿಗೆ ಸುಗ್ಗಿ ಪ್ರಾರಂಭ ವಾಗಲಿದ್ದು ಗುಮ್ಮನ ಮರಿ ಪೂಜೆ, ಸಾಮೂಹಿಕ ಭೋಜನ ಊರೊಡೆ ಯನ ಪೂಜೆ, ಬೆಂಕಿಕೊAಡ ಹಾಯುವದು, ಮೊದಲ ಬೇಟೆ ನಂತರ ಊರು ಸುಗ್ಗಿ, ದೇವರ ಗಂಗಾಸ್ನಾನ ಹಾಗೂ ದೊಡ್ಡ ಪೂಜೆಗಳು ಸುಗ್ಗಿ ಉತ್ಸವದ ಪ್ರಮುಖ ಭಾಗಗಳಾಗಿವೆ. ಇದರೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ ಚೌಡ್ಲು, ಯಡೂರು, ಹಾನಗಲ್ಲು ಶೆಟ್ಟಳ್ಳಿ ಗ್ರಾಮಗಳಲ್ಲೂ ಸುಗ್ಗಿ ಉತ್ಸವ ನಡೆಯಲಿವೆ.
ಇದೀಗ ಎಲ್ಲೆಡೆ ಭತ್ತ ಕೃಷಿ ಮುಕ್ತಾಯವಾಗಿದ್ದು, ಮುಂದಿನ ಸಾಲಿನ ಕೃಷಿ ಕಾರ್ಯಕ್ಕೆ ಮಳೆಗಾಲ ಆಗಮಿಸಬೇಕಾಗಿದೆ. ಈ ಅವಧಿ ಯಲ್ಲಿ ಪ್ರಕೃತಿದೇವಿ ಮುನಿಸಿಕೊಳ್ಳದೆ ಕಾಲಕಾಲಕ್ಕೆ ತಕ್ಕಂತೆ ಮಳೆ-ಬೆಳೆ ನೀಡಲಿ ಎಂದು ಗ್ರಾಮ ದೇವರಲ್ಲಿ ಪೂಜಿಸಿ ಕೃಷಿ ಕಾರ್ಯದಲ್ಲಿ ತೊಡ ಗಲು ಸಿದ್ಧತೆ ನಡೆ ಸುವ ಗ್ರಾಮೀಣ ರೈತನ ಸಂಭ್ರಮದ ಸುಗ್ಗಿಗೆ ದಿನಗಣನೆ ಆರಂಭವಾಗಿದೆ.
- ವಿಜಯ್ ಹಾನಗಲ್