ಮಡಿಕೇರಿ, ಏ. ೪: ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಗ್ರಾ.ಪಂ ನೌಕರರ ಹಕ್ಕೊತ್ತಾಯ ಸಮಾವೇಶ ಮತ್ತು ಮಾರುತಿ ಮಾನ್‌ಪಡೆ ನುಡಿ ನಮನ ಕಾರ್ಯಕ್ರಮ ತಾ. ೨೪ ರಂದು ಸಿದ್ದಾಪುರದ ಮಾರುತಿ ಮಾನ್‌ಪಡೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕೊರೊನಾ ವಾರಿಯರ್ಸ್ಗಳಾಗಿ ಜನತೆಯ ಸೇವೆ ಸಲ್ಲಿಸಿದ್ದಾರೆ. ವಿವಿಧ ಇಲಾಖೆಗಳ ಕೆಲಸಗಳನ್ನು ಗ್ರಾಮ ಪಂಚಾಯಿತಿ ನೌಕರರು ನಿರ್ವಹಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ನೌಕರರಿಗೆ ಆಡಳಿತ ನಡೆಸುವ ಸರ್ಕಾರಗಳು ಮೂಲ ಸೌಲಭ್ಯ ಹಾಗೂ ವೇತನ ಕೊಡಲು ಮೀನಾಮೇಷ ಎಣಿಸುತ್ತಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲೆಯಲ್ಲಿ ೧೦೪ ಗ್ರಾಮ ಪಂಚಾಯಿತಿಗಳಲ್ಲಿ ಈಗಲೂ ಹಲವಾರು ಗ್ರಾಮ ಪಂಚಾಯಿತಿಗಳ ಮಾಸಿಕ ವೇತನ ೬-೭ ತಿಂಗಳುಗಳಿAದ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಇಂತಹ ಸಂದಿಗ್ಧ ಸಂದರ್ಭದಲ್ಲಿ ೪ನೇ ಜಿಲ್ಲಾ ಸಮಾವೇಶ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಅಂದು ಬೆಳಗ್ಗೆ ೧೦.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕಾರ್ಮಿಕ ಜಿಲ್ಲಾಧಿಕಾರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾ.ಪಂ ಇಓ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಜಿ. ನವೀನ್, ಕುಶಾಲನಗರ ತಾಲೂಕು ಅಧ್ಯಕ್ಷ ಎ. ಅಪ್ಪಣ್ಣ, ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಜಾನಕಿ ಇದ್ದರು.