ಸೋಮವಾರಪೇಟೆ, ಏ. ೩: ತಾಲೂಕಿನ ಗರ್ವಾಲೆ ಗ್ರಾ. ಪಂ. ವ್ಯಾಪ್ತಿಯ ಕೋಟೆಬೆಟ್ಟದಲ್ಲಿ ಕಳೆದ ಎರಡು ದಿನಗಳಿಂದ ಆವರಿಸಿದ್ದ ಕಾಡ್ಗಿಚ್ಚು ಕೊನೆಗೂ ತಹಬದಿಗೆ ಬಂದಿದೆ.

ಮಾದಾಪುರದ ಅರಣ್ಯ ಇಲಾಖಾ ಸಿಬ್ಬಂದಿಗಳ ಅವಿರತ ಶ್ರಮದಿಂದಾಗಿ ಇಂದು ಕಾಡ್ಗಿಚ್ಚನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಕಡಿದಾದ ಬೆಟ್ಟದಲ್ಲಿ ರಸ್ತೆ ಇಲ್ಲದ್ದರಿಂದ ವಾಹನ ತೆರಳಲು ಸಾಧ್ಯವಾಗದ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಲು ಸಾಧ್ಯ ವಾಗಿರಲಿಲ್ಲ. ಈ ಹಿನ್ನೆಲೆ ಅರಣ್ಯ ಇಲಾಖಾ ಸಿಬ್ಬಂದಿಗಳೇ ಮರದ ಕೊಂಬೆಗಳನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾರೆ. ನಿನ್ನೆ ರಾತ್ರಿ ದಟ್ಟವಾಗಿ ಹಿಮ ಬಿದ್ದ ಹಿನ್ನೆಲೆ ಬೆಂಕಿಯ ಕೆನ್ನಾಲಿಗೆ ಹೆಚ್ಚು ವಿಸ್ತರಿಸಿಲ್ಲ. ಆದರೂ ಮೊನ್ನೆಯಿಂದ ಉಂಟಾದ ಕಾಡ್ಗಿಚ್ಚು ಸುಮಾರು ೨೦ ಎಕರೆಗೂ ಅಧಿಕ ಪ್ರದೇಶವನ್ನು ಸುಟ್ಟು ಭಸ್ಮಮಾಡಿದೆ.

ಸ್ಥಳಕ್ಕೆ ಆರ್‌ಎಫ್‌ಓ ಶಮಾ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಮಾದಾಪುರದ ಡಿಆರ್‌ಎಫ್‌ಓ ಜಗದೀಶ್, ವನಪಾಲಕ ಭರಮಪ್ಪ, ಈರಪ್ಪ ದಳವಾಯಿ, ಆರ್‌ಆರ್‌ಟಿ ತಂಡದ ಸಿಬ್ಬಂದಿಗಳು ಭಾಗವಹಿಸಿದ್ದರು.