ಮಡಿಕೇರಿ, ಏ. ೩: ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ನಡೆದ ೪೪ನೇ ತಂಡದ ಆರಕ್ಷಕ ಉಪ ನಿರೀಕ್ಷಕರು (ಸಿವಿಲ್ ಮತ್ತು ಕೆಎಸ್‌ಐಎಸ್‌ಎಫ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ತರಬೇತಿ ಅವಧಿಯಲ್ಲಿ ನೀಡುವ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಕೊಡಗು ಮೂಲದ ಕುಂಜಿಲನ ಚಿಂತನ್ ಕೆ.ಆರ್. (ಪ್ರೊಬೆಷನರಿ ಪಿಎಸ್‌ಐ) ಪಡೆದುಕೊಂಡಿದ್ದಾರೆ.

ಮುಖ್ಯಮAತ್ರಿಗಳ ಟ್ರೋಫಿ, ಗೃಹಮಂತ್ರಿಗಳ ಖಡ್ಗ, ಡಿಜಿ ಐಜಿಪಿ ಅವರ ಬೇಟನ್, ಮತ್ತು ನಿವೃತ್ತ ಡಿಜಿಪಿ ಗರುಡಾಚಾರ್ ಅವರ ರೂ. ೧೦ ಸಾವಿರ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ‘ಬೆಸ್ಟ್ ಇನ್ ರಿವಾಲ್ವರ್ ಫೈರಿಂಗ್’ ಟ್ರೋಫಿ ಕೂಡ ಪಡೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಪದಮ್ ಕುಮಾರ್ ಗರ್ಗ್, ಐ.ಪಿ.ಎಸ್, ಡಿ.ಜಿ.ಪಿ, ತರಬೇತಿ ವಿಭಾಗ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರಿನ ನಿರ್ದೇಶಕ ವಿಪುಲ್ ಕುಮಾರ್ ಐಪಿಎಸ್ ಹಾಗೂ ಉಪ ನಿರ್ದೇಶಕಿ ಡಾ. ಸುಮನ್ ಡಿ ಪೆನ್ನೇಕರ್ ಐಪಿಎಸ್ ಮತ್ತಿತರರು ಹಾಜರಿದ್ದರು.

ಚಿಂತನ್ ಅವರು ನಿವೃತ್ತ ಎಎಸ್‌ಐ ಕುಂಜಿಲನ ರಮೇಶ್ ಕೆ.ಯು. ಹಾಗೂ ಜಾಹ್ನವಿ ದಂಪತಿಗಳ ಪುತ್ರರಾಗಿದ್ದು, ಮೂರ್ನಾಡು ಹೋಬಳಿಯ, ಕೊಡಂಬೂರು ಗ್ರಾಮದವರು. ಹಾಕಿ ಕ್ರೀಡೆಯಲ್ಲೂ ರಾಷ್ಟçಮಟ್ಟವನ್ನು ಪ್ರತಿನಿಧಿಸಿರುವ ಚಿಂತನ್ ಕೆ.ಆರ್. ಸದ್ಯ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ತರಬೇತಿ ಮುಗಿಸಿ ಚಿಕ್ಕಮಗಳೂರು ಜಿಲ್ಲೆಯ ಪಿಎಸ್‌ಐ (ಸಿವಿಲ್) ಆಗಿ ನೇಮಕಗೊಂಡಿದ್ದಾರೆ.