.jpg)
ಗೋಣಿಕೊಪ್ಪಲು, ಏ. ೪: ಪೊನ್ನಂಪೇಟೆ ಸಮೀಪದ ಮುಗುಟಗೇರಿಯ ಲೈನ್‌ಮನೆಯಲ್ಲಿ ತನ್ನ ಪತ್ನಿ ಹಾಗೂ ಅಮಾಯಕ ಬಂಧುಗಳ ಮೇಲೆ ಪೆಟ್ರೋಲ್ ಸುರಿದು ಹಸುಳೆ ಸೇರಿದಂತೆ ಆರು ಮಂದಿಯ ಸಜೀವ ದಹನಕ್ಕೆ ಕಾರಣವೆನ್ನಲಾದ ಆರೋಪಿ ಯರವರ ಬೋಜನನ್ನು ವಶಕ್ಕೆ ಪಡೆಯಲು ಪೊಲೀಸರು ತಮ್ಮ ಶೋಧಕಾರ್ಯ ಮುಂದುವರಿಸಿದ್ದಾರೆ.ಇಡೀ ರಾಜ್ಯವನ್ನು ತಲ್ಲಣಗೊಳಿಸಿದ್ದ ಈ ಪ್ರಕರಣದಿಂದಾಗಿ ಐಜಿಪಿ ಹಾಗೂ ಕೊಡಗು ಎಸ್.ಪಿ. ಖುದ್ದಾಗಿ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆ ಸ್ಥಳಕ್ಕೆ ಆಗಮಿಸಿದ ಶ್ವಾನದಳ, ಬೆರಳಚ್ಚು ತಜ್ಞರು ಆರೋಪಿ ಸುಳಿವಿಗಾಗಿ ಪ್ರಯತ್ನ ನಡೆಸಿದರು. ಶ್ವಾನದಳ ಸಿಬ್ಬಂದಿಗಳು ಘಟನೆ ನಡೆದ ಸುತ್ತಮುತ್ತಲಿನ ಕಾಫಿ ತೋಟ, ಕೆರೆಯ ದಂಡೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದರು.ಬೆಂಕಿಯಿAದ ಕೆಲವರನ್ನು ಉಳಿಸುವ ಪ್ರಯತ್ನ ಮಾಡಿದ ವೇಳೆ ಕೈ, ಕಾಲು, ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿ ಮಡಿಕೇರಿಯ ಆಸ್ಪತ್ರೆಗೆ ದಾಖಲಾಗಿದ್ದ ಮಂಜು ಹಾಗೂ ತೋಲ ವೈದ್ಯರ ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ.
ಐದು ಕಾರ್ಯಾಚರಣೆ ತಂಡ
ಪ್ರಕರಣದ ಗಂಭೀರತೆ ಹಿನ್ನೆಲೆ ಕೊಡಗು ಎಸ್.ಪಿ.
(ಮೊದಲ ಪುಟದಿಂದ) ನೇತೃತ್ವದಲ್ಲಿ ಐದು ವಿಶೇಷ ಕಾರ್ಯಾಚರಣೆ ತಂಡವನ್ನು ರಚಿಸಲಾಗಿದ್ದು ಆರೋಪಿ ಬೋಜನ ಸುಳಿವಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಹಿಂದೆ ಆರೋಪಿ ಬೋಜ ವಾಸವಿದ್ದ ಸ್ಥಳಗಳನ್ನು ಜಾಲಾಡಿದ್ದಾರೆ.
ಆರೋಪಿಯ ಸುಳಿವು ನೀಡುವಂತೆ ಪೊಲೀಸರು ಆರೋಪಿ ಬೋಜನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣವು ಸೇರಿದಂತೆ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೂ ಆರೋಪಿಯ ಸುಳಿಯು ಎಲ್ಲಿಯೂ ಸಧ್ಯಕ್ಕೆ ಲಭಿಸಿಲ್ಲ. ಆರೋಪಿ ಬೋಜ ಬಳಸುತ್ತಿದ್ದ ಮೊಬೈಲ್ ಘಟನೆಯ ದಿನದಿಂದಲೇ ಸ್ವಿಚ್ ಆಫ್ ಆಗಿದೆ, ಇದರಿಂದಾಗಿ ಪೊಲೀಸರಿಗೆ ಟವರ್ ಲೊಕೇಷನ್ ಕೂಡಾ ಲಭಿಸುತ್ತಿಲ್ಲ.
ತನ್ನ ಪತ್ನಿ ಬೇಬಿಯನ್ನು ಕೊಲ್ಲುವುದಾಗಿ ಆ ನಂತರದಲ್ಲಿ ನಾನೇ ಸಾಯುತ್ತೇನೆ ಎಂದು ಬಂಧುಗಳ ಮುಂದೆ ಹೇಳುತ್ತಿದ್ದ ಆರೋಪಿ ಬೋಜ ಘಟನೆಯ ನಂತರ ಭಯಗೊಂಡು ಎಲ್ಲಿಗೆ ತೆರಳಿರಬಹುದು ಎನ್ನುವದು ಇನ್ನೂ ರಹಸ್ಯವಾಗಿ ಉಳಿದಿದೆ.
ಆರೋಪಿ ಬೋಜ ಮೊಬೈಲ್ ಸಂಪರ್ಕಕ್ಕೆ ಸಿಗದೇ ಇರುವ ನಿಟ್ಟಿನಲ್ಲಿ ಹೊರ ಜಿಲ್ಲೆಯತ್ತ ಪ್ರಯಾಣ ಬೆಳೆಸಬೇಕು ಎಂದಾದಲ್ಲಿ ಅಷ್ಟು ದೊಡ್ಡ ಮೊತ್ತದ ಹಣ ಬೋಜನ ಬಳಿ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
- ಹೆಚ್. ಕೆ. ಜಗದೀಶ್
