ಮಡಿಕೇರಿ, ಏ. ೪: ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಜಾಸೀಟಿಗೆ ಭೇಟಿ ನೀಡುವುದರಿಂದ ರಾಜಾಸೀಟಿನಲ್ಲಿ ವಿವಿಧ ಬಗೆಯ ಹೂ ಗಿಡಗಳಿಂದ ಇನ್ನಷ್ಟು ಆಕರ್ಷಕಗೊಳಿಸ ಬೇಕು ಹಾಗೂ ಕ್ರಿಯಾತ್ಮಕವಾಗಿ ಹೊಸತನದಿಂದ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಕೋವಿಡ್-೧೯ ಪ್ರಕರಣಗಳು ಹೆಚ್ಚಾಗುತ್ತಿರುವುದ ರಿಂದ ರಾಜಾಸೀಟು ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ರಾಜಾಸೀಟಿನ ಪುಟಾಣಿ ರೈಲು ಎರಡು ವರ್ಷಗಳಿಂದ ಸ್ಥಗಿತವಾಗಿದ್ದು, ಇದನ್ನು ಅಭಿವೃದ್ಧಿಪಡಿಸಲು ಸಾರ್ವಜನಿಕರು ಬೇಡಿಕೆ ನೀಡುತ್ತಿದ್ದು, ಈ ಬಗ್ಗೆ ತ್ವರಿತ ಕ್ರಮವಹಿಸಬೇಕು ಎಂದರು.

ಗಣಕೀಕೃತ ಟಿಕೆಟ್‌ನಿಂದ ಬರುವ ಹಣವನ್ನು ಯಾವ ರೀತಿಯಲ್ಲಿ ಅಭಿವೃದ್ಧಿಗೆ ಉಪಯೋಗಿಸಿ ಕೊಳ್ಳಬಹುದು ಎಂಬ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳಲು ಸೂಚಿಸಿದರು ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನು ಸಹ ಅಭಿವೃದ್ಧಿಗೊಳಿಸಬೇಕಿದೆ ಎಂದು ಹೇಳಿದರು.

ರಾಜಾಸೀಟಿನ ವ್ಯೂ ಪಾಯಿಂಟ್ ನಿಂದ ಕಾಣಿಸುವ ಬೆಟ್ಟಗಳ ಕುರಿತು ಮಾಹಿತಿ ಫಲಕ ಅಳವಡಿಸಬೇಕು ಎಂದರು. ಸಾಮಾನ್ಯವಾಗಿ ಕಂಡುಬರುವ ಮರಗಳು ಮತ್ತು ಪಕ್ಷಿಗಳ ಕುರಿತು, ಚಿತ್ರದೊಂದಿಗೆ ಅವುಗಳ ಹೆಸರಿನ ಫಲಕಗಳನ್ನು ಹಾಕಿದ್ದಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡಿದಂತಾಗುತ್ತದೆ ಎಂದು ಚಾರುಲತ ಸೋಮಲ್ ಅವರು ಹೇಳಿದರು.

ನೆಹರು ಮಂಟಪ ಮತ್ತು ರಾಜರ ಗದ್ದುಗೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದವರು ನಿರ್ವಹಿಸಬೇಕು. ಎಷ್ಟು ಪೈಸಾರಿ ಜಾಗಗಳು ಬರುವುದು ಅವುಗಳನ್ನು ಪ್ರಸ್ತಾವನೆಗೆ ಕಳುಹಿಸಬೇಕೆಂದು ಹೇಳಿದರು. ಗದ್ದುಗೆಯಲ್ಲಿ ವಿವಿಧ ಬಗೆಯ ಗುಲಾಬಿಗಳನ್ನು ನೆಡುವುದರ ಮೂಲಕ ಗುಲಾಬಿ ಉದ್ಯಾನವನ್ನಾಗಿಸಿ ಆಕರ್ಷಕಗೊಳಿಸಬಹುದು ಎಂದು ಹೇಳಿದರು.

ಕೂರ್ಗ್ ವಿಲೇಜ್ ಅಭಿವೃದ್ಧಿಯ ಕುರಿತು ಮಾತನಾಡಿ, ಇದೊಂದು ಸುಂದರ ಸ್ಥಳವಾಗಿದ್ದು ಇದರ ಗುಣಮಟ್ಟವು ಅಷ್ಟೇ ಒಳ್ಳೆಯದಾಗಿರಬೇಕು ಎಂದು ಹೇಳಿದರು. ಅಲ್ಲಿನ ರಸ್ತೆ ಸಾರಿಗೆಯನ್ನು ಸಹ ಅಭಿವೃದ್ಧಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಆ ನಿಟ್ಟಿನಲ್ಲಿ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದರ ಕುರಿತು ಫಲಕ ಅಳವಡಿಸಬೇಕು ಎಂದು ಹೇಳಿದರು.

ತೋಟಗಾರಿಕಾ ಉಪ ನಿರ್ದೇಶಕ ಶಶಿಧರ್ ಅವರು ರಾಜಾಸೀಟು ಅಭಿವೃದ್ಧಿ ಬಗ್ಗೆ ಹಲವು ಮಾಹಿತಿ ನೀಡಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಇತರರು ಇದ್ದರು.