ಶ್ರೀಮAಗಲ, ಏ. ೩: ಪೊನ್ನಂಪೇಟೆ ತಾಲೂಕು, ಪಾಕೇರಿ ನಾಡು ಬಿರುನಾಣಿ ಗ್ರಾಮದಲ್ಲಿನ ಶ್ರೀ ಪುತ್ತು ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ನಡೆಯುವ ವಿಶಿಷ್ಟವಾದ ಪೊಮ್ಮಂಗಲ (ಎಡಮೆ ಮಂಗಲ) ಹರಕೆ ಸಲ್ಲಿಸುವ ಆಚರಣೆ ಸಾಂಪ್ರದಾಯಿಕ ಪದ್ಧತಿಯಂತೆ ಶನಿವಾರ ನಡೆಯಿತು.

ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಬೆಳಿಗ್ಗೆಯಿಂದಲೇ ಹರಕೆ ಸಲ್ಲಿಸುವವರು ತಳಿರು ತೋರಣಕಟ್ಟಿ ಮದುವೆ ಮನೆಯ ಸಂಭ್ರಮದ ಆಚರಣೆ ಮಾಡಿದರು. ಮಧ್ಯಾಹ್ನದ ನಂತರ ಪುತ್ತು ಭಗವತಿ ದೇವಸ್ಥಾನಕ್ಕೆ ಆಗಮಿಸಿ ದುಡಿಕೊಟ್ಟ್ ಪಾಟ್ ನೊಂದಿಗೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಹರಕೆ ಸಲ್ಲಿಸಿದರು. ಹಲವಾರು ಮಕ್ಕಳು ಪೊಮ್ಮಂಗಲದ ಹರಕೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭ ಕೊಡವ ಜಾನಪದ ಬಾಳೋ ಪಾಟ್‌ನೊಂದಿಗೆ ಕಳಶ ಹೊತ್ತು ಭಗವತಿ ದೇವಿಗೆ ಹರಕೆ ಒಪ್ಪಿಸುವ ಪದ್ದತಿ ಪುರಾತನ ಕಾಲದಿಂದಲೂ ಸ್ಥಳೀಯ ಜನರ, ಭಕ್ತಾಧಿಗಳ ನಂಬಿಕೆಯಲ್ಲಿ ನಡೆದುಕೊಂಡು ಬಂದಿದೆ. ಪುತ್ತು ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಭಾನುವಾರ (ಇಂದು) ದೇವರ ಅವಭೃತ ಸ್ನಾನ, ವಿಶೇಷ ಪೂಜೆ ನಡೆಯಲಿದೆ. ಪೊಮ್ಮಂಗಲ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ದೇವತಕ್ಕರಾದ ಅಣ್ಣಳಮಾಡ ಗಿರೀಶ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಪುತ್ತು ಭಗವತಿ ದೇವಸ್ಥಾನದ ಅರ್ಚಕ ದೀಕ್ಷಿತ ಅವರು ದೇವಸ್ಥಾನದ ವಾರ್ಷಿಕ ಉತ್ಸವದ ಪೂಜಾ ಕೈಂಕರ್ಯ ಕೈಗೊಂಡಿದ್ದಾರೆ.

ಪೊಮ್ಮAಗಲದ ವಿಶೇಷತೆ ಹಾಗೂ ಹಿನ್ನೆಲೆಯ ವಿವರ

ಪಾಕೇರಿನಾಡು

(ಮೊದಲ ಪುಟದಿಂದ) ಬಿರುನಾಣಿಯ ಶ್ರೀ ಪುತ್ತ್ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವದಲ್ಲಿ ಕೊಡವ ಮದುವೆ ಪದ್ಧತಿಯಲ್ಲಿ ವಧು-ವರರು ಧರಿಸುವ ಉಡುಗೆಯನ್ನು ಪರಸ್ಪರ ಅದಲು ಬದಲಾಗಿ ಧರಿಸಿ ಹರಕೆ ತೀರಿಸುವುದು ವಿಶೇಷವಾಗಿದೆ. ಅಂದರೆ ಗಂಡು ಮಕ್ಕಳಿಗೆ ಸ್ತಿçÃಯರಂತೆ ಸೀರೆ-ರವಿಕೆ ಉಡುಗೆ ಹಾಗೂ ಹೆಣ್ಣು ಮಕ್ಕಳಿಗೆ ಪುರುಷರಂತೆ ಬಿಳಿ (ಕುಪ್ಯಚೇಲೆ) ಕುಪ್ಪಸದ ಉಡುಪನ್ನು ಧರಿಸಿ ಅವರವರ ಮನೆಯಲ್ಲಿ ಕೊಡವ ಮದುವೆ ಸಂದರ್ಭ ಮಾಡುವ ಎಲ್ಲಾ ಸಾಂಪ್ರದಾಯಿಕ ಪದ್ಧತಿಯ ವಿಧಿ-ವಿಧಾನಗಳನ್ನು ಮಾಡಲಾಗುತ್ತದೆ.

ಸಾಂಪ್ರದಾಯಿಕ ಮೂರು ಕಾಲಿನ ಮುಕ್ಕಾಲಿ (ಮೂರು ಕಾಲಿನ ಸಣ್ಣ ಸ್ಟೂಲು)ನಲ್ಲಿ ಕೂರಿಸಿ ಮದುವೆಯಲ್ಲಿ ಜನರು ಆಶೀರ್ವಾದಿಸುವಂತೆ ‘ಪೊಮ್ಮಂಗಲ’ದಲ್ಲಿ ನಡೆಯುತ್ತದೆ. ಉಡುಪು ಧರಿಸಿದವರು ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಮನೆಯಲ್ಲಿನ ಸಂಪ್ರದಾಯ ನಂತರ ದೇವಸ್ಥಾನಕ್ಕೆ ಬಂದು ೩ ಸುತ್ತು ಪ್ರದಕ್ಷಿಣೆ ಹಾಕಿ ಹರಕೆ ತೀರಿಸುತ್ತಾರೆ. ಇದೊಂದು ನಂಬಿದ ದೇವರಿಗೆ ಹರಕೆಯಾಗಿದ್ದು, ಮಕ್ಕಳಿಗೆ ಅನಾರೋಗ್ಯ ಕಾಣಿಸಿಕೊಂಡ ಸಂದರ್ಭ ವಾಸಿಯಾಗಲು, ಮದುವೆಯಾಗಿ ಮಕ್ಕಳಾಗದವರಿಗೆ ಮಕ್ಕಳಾಗುವಂತೆ ಕೋರಿಕೆ ಸಲ್ಲಿಸಿ ಅದಕ್ಕಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಮಕ್ಕಳ ಆರೋಗ್ಯ ವಾಸಿಯಾದ ನಂತರ ಆ ಮಕ್ಕಳನ್ನು ತಂದೆ-ತಾಯಿ ಪೊಮ್ಮಂಗಲ ಮಾಡಿಸುತ್ತಾರೆ.

ಮಕ್ಕಳಿಗೆ ತಾಯಿ-ತಂದೆ ಪೊಮ್ಮಂಗಲದ ಹರಕೆ ಮಾಡಿಕೊಂಡು ತೀರಿಸದಿದ್ದರೆ ಅಂತ ಮಕ್ಕಳಿಗೆ ಕಂಕಣ ಭಾಗ್ಯ ಒದಗಿ ಬರುವುದಿಲ್ಲವೆಂಬ ನಂಬಿಕೆಯೂ ಇದೆ. ಆದ್ದರಿಂದ ಮಕ್ಕಳು ಪ್ರೌಢಾವಸ್ಥೆಗೆ ಬರುವ ಮೊದಲು ಅಂದರೆ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಪ್ರೌಢಾವಸ್ತೆಗೆ ಮೊದಲೇ ಈ ಹರಕೆ ತೀರಿಸಬೇಕು. ಗಂಡು ಮಕ್ಕಳು ತಡವಾಗಬಾರದು.