ವೀರಾಜಪೇಟೆ, ಏ. ೨: ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಗಾಯತ್ರಿ ಚ್ಯಾರಿಟೇಬಲ್ ಟ್ರಸ್ಟ್ನ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಲಾಯಿತು. ಸಿದ್ದಾಪುರ ರಸ್ತೆಯ ನಿರ್ಮಲ ರಮಣ ನರ್ಸಿಂಗ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮೈಸೂರಿನ ಕ್ರಿಯೇಟಿವ್ ಅಕಾಡೆಮಿ ಫಾರ್ ಥಿಯೇಟರ್ ಸೈನ್ಸ್ನ ನಿರ್ದೇಶಕ ನಾÀ.ಶ್ರೀನಿವಾಸ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡುತ್ತಾ-“ಗ್ರಾಮೀಣ ರಂಗಕಲೆಗಳ ಪ್ರೋತ್ಸಾಹ ಹಾಗೂ ಬೆಳವಣಿಗೆಗೆ ಕರ್ನಾಟಕ ನಾಟಕ ಅಕಾಡೆಮಿ ಹಲವು ವಿಧದ ಕಾರ್ಯಕ್ರಮಗಳನ್ನು ಸಂದರ್ಭಕ್ಕನುಸಾರ ನಡೆಸಿಕೊಂಡು ಬರುತ್ತಿವೆ. ಕೊಡಗು ಜಿಲ್ಲೆ ರಂಗಕಲೆಗೆ ಉತ್ತಮ ವಾತಾವರಣವನ್ನು ಹೊಂದಿದ್ದು ಹೆಚ್ಚು ಗ್ರಾಮಗಳನ್ನು ಹೊಂದಿದೆ. ಆದುದರಿಂದ ಗ್ರಾಮೀಣ ರಂಗಕಲೆಯನ್ನು ಬೆಳೆಸುವುದು ಸುಲಭ ಸಾಧ್ಯ” ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಾಟಕ ಅಕಾಡೆಮಿಯ ಸದಸ್ಯೆ ರಾಧಾ ಮಾತನಾಡಿ “ಕೊಡಗು ಜಿಲ್ಲೆಯ ರಂಗಕಲಾವಿದರಿಗೆ ಸ್ಥಳೀಯ ಸಂಘಗಳ ಸಹಯೋಗದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಈ ಮೂಲಕ ಜಿಲ್ಲೆಯ ಗ್ರಾಮೀಣ ರಂಗ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವಂತಾಗಬೇಕು” ಎಂದರು.

ಖ್ಯಾತ ಗಿರಿಜನ ರಂಗಕಲಾವಿದ ರಮೇಶ್ ನಾಗರಹೊಳೆ ಅವರನ್ನು ರಂಗಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ಸನ್ಮಾನಿಸಲಾಯಿತು. ಶ್ರೀಶ ಅವರು ಅತಿಥಿಗಳಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯತ್ರಿ ಚ್ಯಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶ್ರೀನಿವಾಸಗಿರಿ ವಹಿಸಿದ್ದರು. ಅಮ್ಮತ್ತಿಯ ಚೌಡೇಶ್ವರಿ ನಾಟಕ ಸಂಘದ ಕಲಾವಿದರಿಂದ “ಬಭ್ರಬಾಹು” ನಾಟಕದ ಪ್ರದರ್ಶನ ಹಾಗೂ ರಂಗಗೀತೆಗಳ ಪ್ರಸ್ತುತಿ ನಡೆಯಿತು. ಗಾಯತ್ರಿ ಚ್ಯಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.