ಮಡಿಕೇರಿ, ಏ.೨: ಮಡಿಕೇರಿ ನಗರಸಭೆ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಸ್ಪರ್ಧಾಕಾಂಕ್ಷಿಗಳು ಹಸ್ತಕ್ಷೇಪ ಮಾಡುವ ಮೂಲಕ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮತ್ತು ಬದಲಾವಣೆಗೆ ಚುನಾವಣಾಧಿಕಾರಿಗಳು ಅವಕಾಶ ನೀಡಿದ್ದಾರೆ. ಆದರೆ ವಿವಿಧ ವಾರ್ಡ್ಗಳ ಕೆಲವು ಸ್ಪರ್ಧಾಕಾಂಕ್ಷಿಗಳು ಪರಿಸ್ಥಿತಿಯ ದುರ್ಲಾಭ ಪಡೆದು ತಮ್ಮ ಅನುಕೂಲಕ್ಕೆ ತಕ್ಕಂತೆ ಹೆಸರು ಸೇರ್ಪಡೆಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ದೂರಿದ್ದಾರೆ. ತಮ್ಮ ಪರ ಮತ ಚಲಾವಣೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕೆ ಕೆಲವು ಆಕಾಂಕ್ಷಿಗಳು ಅರ್ಹ ಮತದಾರರ ಗಮನಕ್ಕೆ ಬಾರದ ರೀತಿಯಲ್ಲಿ ಮತ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮುಂದಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಮೌನಕ್ಕೆ ಶರಣಾಗಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪಗಳು ಕಂಡು ಬಂದಲ್ಲಿ ಅದಕ್ಕೆ ಚುನಾವಣಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿರುವ ಗಣೇಶ್, ಈ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧ ಇರುವುದಾಗಿ ತಿಳಿಸಿದ್ದಾರೆ.

ಅಧಿಕಾರಿಗಳು ಸ್ಪರ್ಧಾಕಾಂಕ್ಷಿಗಳ ಮಾತು ಕೇಳುವುದನ್ನು ಮೊದಲು ನಿಲ್ಲಿಸಬೇಕು, ತಪ್ಪಿದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಜೆಡಿಎಸ್ ವತಿಯಿಂದ ದೂರು ನೀಡಲಾಗುವುದು ಎಂದು ಸ್ಪಷ್ಟಪಡಿಸಿರುವ ಗಣೇಶ್, ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಮತ್ತು ಸಂಬAಧಿಸಿದ ಮತದಾರರೇ ಹೆಸರು ಸೇರ್ಪಡೆಗೆ ಲಿಖಿತ ರೂಪದಲ್ಲಿ ಮನವಿ ನೀಡಿದರೆ ಮಾತ್ರ ಅಧಿಕಾರಿಗಳು ಪುರಸ್ಕರಿಸಬೇಕೆಂದು ಒತ್ತಾಯಿಸಿದ್ದಾರೆ.