ಮಡಿಕೇರಿ, ಏ. ೧: ರಾಜ್ಯದಲ್ಲಿ ಶಾಸಕರನ್ನು ಖರೀದಿಸುವ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಕೊಡಗು ಜಿಲ್ಲೆಯನ್ನು ಎಲ್ಲಾ ರೀತಿಯಲ್ಲಿ ಕಡೆಗಣಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರರಾದ ಸರಿತಾ ಪೂಣಚ್ಚ ಆರೋಪಿಸಿದ್ದಾರೆ.
ಜಿಲ್ಲೆಯ ರೈತರು, ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾನವ - ವನ್ಯಜೀವಿ ಸಂಘರ್ಷ ದಿನೇ ದಿನೇ ಅಧಿಕವಾಗುತ್ತಿವೆ. ಆದರೂ ಸರಕಾರ ಕೊಡಗಿನ ನೆರವಿಗೆ ಬರುತ್ತಿಲ್ಲ. ಇತ್ತೀಚೆಗೆ ಮಂಡಿಸಿರುವ ಬಜೆಟ್‌ನಲ್ಲೂ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಸ್ವಪಕ್ಷದವರೇ ಇದೀಗ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡಿರುವುದು ಸರಕಾರದ ವೈಫಲ್ಯವನ್ನು ತೋರಿಸುತ್ತಿದ್ದು, ಜನರು ಬಿಜೆಪಿ ಒಳ ರಾಜಕೀಯದ ಬಗ್ಗೆ ಅನುಮಾನ ವ್ಯಕ್ತಪಡಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ. ಲೈಂಗಿಕ ಕಿರುಕುಳದ ಆರೋಪಿಯನ್ನು ಬಂಧಿಸದೆ ರಕ್ಷಣೆ ನೀಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರಕಾರ ಜನರ ಭಾವನೆಗಳನ್ನು ಕೆರಳಿಸುತ್ತಿದೆ ಎಂದು ಅವರು ಹೇಳಿದ್ದು, ಸ್ವಪಕ್ಷದವರೇ ದೂರು ನೀಡುವಂತಾಗಿರುವುದು ಇದನ್ನು ತೋರಿಸುತ್ತದೆ ಎಂದಿದ್ದಾರೆ.