ಮಡಿಕೇರಿ, ಏ. ೨: ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿನ ಉತ್ತಮ ಕಾರ್ಯನಿರ್ವಹಣೆ ಹಾಗೂ ಸಾಧನೆಗೆ ನೀಡಲಾಗುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಟ್ರೋಫಿಯನ್ನು ಈ ಬಾರಿ ಕುಶಾಲನಗರ ಡಿವೈಎಸ್‌ಪಿ ಕಚೇರಿಯ ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ದಯಾನಂದ್ ಪಡೆದುಕೊಂಡರು. ಈ ಪ್ರಶಸ್ತಿಗೆ ಇಲಾಖೆ ದಯಾನಂದ್ ಅವರನ್ನು ಗುರುತಿಸಿದ್ದು, ಏರ್ ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ ಅವರು ಟ್ರೋಫಿ ವಿತರಿಸಿದರು.

ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಇಂದು ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಜರುಗಿತು. ಪ್ರಸ್ತುತದ ದಿನಗಳಲ್ಲಿ ಎದುರಾಗಿರುವ ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ - ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಪ್ರಯತ್ನಕ್ಕೆ ಸಾರ್ವಜನಿಕರು ಶಿಸ್ತು ಪಾಲನೆಯೊಂದಿಗೆ ಸಹಕಾರ ನೀಡಬೇಕೆಂದು ನಿವೃತ್ತ ಏರ್‌ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ ಅವರು ಕರೆ ನೀಡಿದರು. ಪ್ರತಿಯೊಬ್ಬರು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕೆಂದ ಅವರು ಪೊಲೀಸರ ಕರ್ತವ್ಯ ನಿರ್ವಹಣೆಯ ಬಗ್ಗೆಯೂ ಕಿವಿಮಾತು ಹೇಳಿದರು.

ಅತಿಥಿಗಳಾಗಿ ನಿವೃತ್ತ ಡಿವೈಎಸ್‌ಪಿ ಲಿಂಗಪ್ಪ ಅವರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಅವರು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದ ಕುರಿತು ಮೆಲುಕು ಹಾಕಿ ಉತ್ತಮ ರೀತಿಯ ಕೆಲಸ ನಿರ್ವಹಿಸಲು ಇಲಾಖಾ ಸಿಬ್ಬಂದಿಗಳಿಗೆ ಸಲಹೆಯಿತ್ತರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರು ಧ್ವಜ ದಿನಾಚರಣೆಯ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿAದ ಪಥಸಂಚಲನ ನಡೆಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳಾದ ಸುರೇಶ್ ಅಪ್ಪಯ್ಯ, ಪೂಣಚ್ಚ, ಸುಮತಿ ಸುಬ್ಬಯ್ಯ ಸೇರಿದಂತೆ

(ಮೊದಲ ಪುಟದಿಂದ) ನಿವೃತ್ತ ಪೊಲೀಸರು, ಸೇನಾಧಿಕಾರಿಗಳು ಭಾಗಿಗಳಾಗಿದ್ದರು. ಡಿವೈಎಸ್‌ಪಿ ಗಳಾದ ಮಡಿಕೇರಿಯ ದಿನೇಶ್ ಕುಮಾರ್, ಕುಶಾಲನಗರದ ಶೈಲೇಂದ್ರ, ವೀರಾಜಪೇಟೆಯ ಜಯಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಎಸ್‌ಪಿ ಕ್ಷಮಾಮಿಶ್ರಾ ಸ್ವಾಗತಿಸಿ, ಡಿವೈಎಸ್‌ಪಿ ಶೈಲೇಂದ್ರ ಹಾಗೂ ಜಯಕುಮಾರ್, ಫೀ.ಮಾ. ಕಾರ್ಯಪ್ಪ ಟ್ರೋಫಿ ಗಳಿಸಿದ ಸಿಬ್ಬಂದಿ ದಯಾನಂದ್ ಮತ್ತು ಅತಿಥಿಗಳಾಗಿದ್ದ ಲಿಂಗಪ್ಪ ಅವರ ಪರಿಚಯ ಮಾಡಿದರು. ದಿನೇಶ್ ಕುಮಾರ್ ವಂದಿಸಿದರು.