ವೀರಾಜಪೇಟೆ, ಏ. ೧: ಕೇರಳ ರಾಜ್ಯದ ಲಾಟರಿಯನ್ನು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ನಗರದ ಕಲ್ಲುಬಾಣೆ ನಿವಾಸಿ ಎಂ.ಎA. ಅಬೂಬಕರ್ (೫೨) ಮತ್ತು ಪಿರಿಯಾಪಟ್ಟಣದ ನಿವಾಸಿ ಪಿ.ಕೆ. ಚಂದ್ರ (೫೧) ಆರೋಪಿತರು ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಅಬೂಬಕ್ಕರ್ ಪ್ರಯಾಣಿಕರನ್ನು ಬಿಡುವ ನೆಪದಲ್ಲಿ ಕೇರಳ ರಾಜ್ಯಕ್ಕೆ ತೆರಳಿ ಲಾಟರಿ ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ. ಕೇರಳ ರಾಜ್ಯಕ್ಕೆ ತೆರಳಿ ಮರಳಿ ನಗರಕ್ಕೆ ಹಿಂದಿರುಗುವ ವೇಳೆಯಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕರ ಕಚೇರಿಗೆ ಬಂದ ಮಾಹಿತಿ ಅನ್ವಯ ಅಕ್ರಮದಲ್ಲಿ ತೊಡಗಿದ್ದ ಆರೋಪಿತರ ವಾಹನವನ್ನು ನಗರದ ಮೀನುಪೇಟೆಯಲ್ಲಿ ಪರಿಶೀಲನೆಗೆ ಒಳಪಡಿಸಲಾಗಿದೆ. ಪರಿಶೀಲನೆಯ ಸಂದÀರ್ಭದಲ್ಲಿ ರೂ. ೪೩,೭೬೦ ಮೌಲ್ಯದ ಒಟ್ಟು ೧೦೯೪ ಲಾಟರಿ ಚೀಟಿಗಳು ಮತ್ತು ಲಾಟರಿ ಮಾರಾಟದಿಂದ ಬಂದ ರೂ. ೧೬೯೦ ನಗದು ವಶಕ್ಕೆ ಪಡೆದಿದ್ದಾರೆ. ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದು ಆರೋಪಿತರ ಮೇಲೆ ಕರ್ನಾಟಕ ರಾಜ್ಯ ನಿಷೇದ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ. ಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್, ಸಿಬ್ಬಂದಿಗಳಾದ ಎನ್.ಎಸ್. ಲೋಕೇಶ್, ಟಿ.ಎಸ್. ಗಿರೀಶ್ ಕಾರ್ಯಾಚರಣೆಯಲ್ಲಿ ಇದ್ದರು.
-ಕೆ.ಕೆ.ಎಸ್.