ಸೋಮವಾರಪೇಟೆ, ಮಾ.೩೧: ಕಾಫಿ ತೋಟದಲ್ಲಿ ರೈಟರ್ ಕೆಲಸಕ್ಕಿದ್ದ ವ್ಯಕ್ತಿಯೇ ತೋಟದಲ್ಲಿದ್ದ ಬೀಟೆ ಮರವನ್ನು ಕಡಿದು ಅಕ್ರಮ ಸಾಗಾಟಕ್ಕೆ ಯತ್ನಿಸಿದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಸಿಐಡಿ ಘಟಕದ ಪೊಲೀಸರು, ರೂ.೧.೭೫ ಲಕ್ಷ ಮೌಲ್ಯದ ಮರವನ್ನು ವಶಕ್ಕೆ ಪಡೆದಿರುವ ಘಟನೆ ಕಿರಗಂದೂರಿನಲ್ಲಿ ನಡೆದಿದೆ.

ಕಿರಗಂದೂರು ಗ್ರಾಮದಲ್ಲಿ ಕಾಫಿ ತೋಟ ಹೊಂದಿರುವ ಬೆಂಗಳೂರಿನ ವ್ಯಕ್ತಿ, ತಮ್ಮ ಕಾಫಿ ತೋಟವನ್ನು ನೋಡಿಕೊಳ್ಳಲು ಸ್ಥಳೀಯ ನಿವಾಸಿ ಎ.ಜೆ. ಶಿವಪ್ಪ (ಪ್ರವೀಣ್) ಎಂಬಾತನನ್ನು ತೋಟದ ರೈಟರ್ ಆಗಿ ನೇಮಿಸಿಕೊಂಡಿದ್ದರು. ತೋಟದಲ್ಲಿ ಬೆಲೆ ಬಾಳುವ ಬೀಟೆ ಮರ ಇದ್ದುದನ್ನು ಕಂಡ ಶಿವಪ್ಪ, ಅದನ್ನು ಅಕ್ರಮವಾಗಿ ಕಡಿದು ನಾಟಾಗಳನ್ನಾಗಿ ಪರಿವರ್ತಿಸಿ ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭ, ಅರಣ್ಯ ಸಿಐಡಿ ಘಟಕದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಅಕ್ರಮವಾಗಿ ಮರಗಳನ್ನು ಸಾಗಾಟಕ್ಕಾಗಿ ಶೇಖರಿಸಿಟ್ಟಿದ್ದ ಆರೋಪಿ ತಲೆ ಮರೆಸಿಕೊಂಡಿದ್ದು, ಬೀಟೆ ಮರವನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ, ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಅರಣ್ಯ ಸಿಐಡಿ ಘಟಕದ ಜಿಲ್ಲಾ ವರಿಷ್ಠಾಧಿಕಾರಿ ಸುರೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಎಂ.ಡಿ. ಅಪ್ಪಾಜಿ, ಮುಖ್ಯ ಪೇದೆ ಕೆ.ಎಸ್. ಚಂಗಪ್ಪ, ಎನ್.ಆರ್. ರಮೇಶ್, ಎಎಸ್‌ಐ ಗಣೇಶ್ ಅವರುಗಳು ಭಾಗವಹಿಸಿದ್ದರು.