ಕೂಡಿಗೆ / ಮಡಿಕೇರಿ, ಮಾ. ೩೦ ಕಳೆದ ಬಾರಿ ಕೊರೊನಾದ ನಡುವೆ ಶುಂಠಿ ಬೆಳೆಯು ಉತ್ತಮವಾಗಿ ಬಂದರೂ ಸಹ ಮಾರುಕಟ್ಟೆಯಲ್ಲಿ ಸಮರ್ಪಕವಾದ ಬೆಲೆ ಇಲ್ಲದೆ ಜಿಲ್ಲೆಯ ರೈತರು ಭಾರೀ ನಷ್ಟಕ್ಕೆ ಒಳಗಾಗಿದ್ದರು. ಈ ಬಾರಿ ಶುಂಠಿ ಬಿತ್ತನೆ ಬೀಜದ ಬೆಲೆ ತೀರ ಕಡಿಮೆ ಇರುವುದರಿಂದ ಈ ಬಾರಿಯೂ ಜಿಲ್ಲೆಯ ನೂರಾರು ರೈತರು ಶುಂಠಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಉತ್ತರ ಕೊಡಗಿನಲ್ಲಿ ಶುಂಠಿ ಬೆಳೆ ಪ್ರಮಾಣ ಹೆಚ್ಚುತ್ತಿರುವ ಮಾಹಿತಿ ಜಿಲ್ಲಾ ತೋಟಗಾರಿಕಾ ಇಲಾಖಾ ಮಾಹಿತಿ ಮೂಲಕ ಸ್ಪಷ್ಟಗೊಂಡಿದೆ. ಆದರೆ, ಕೊಡಗಿನ ಶುಂಠಿ ಕೃಷಿಕರು ಕೆಲವೊಮ್ಮೆ ಮಾರ್ಗದರ್ಶನ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದು ಇದನ್ನು ವೈಜ್ಞಾನಿಕವಾಗಿ ಉತ್ತಮ ತಳಿಯನ್ನು ಆರಿಸುವ ಮೂಲಕ ಬೆಳೆಯುವಂತೆ ತಜ್ಞರಾದ ಅಂಕೇಗೌಡ ಸಲಹೆಯಿತ್ತಿದ್ದಾರೆ.
ಜಿಲ್ಲೆಯ ರೈತರು ಕಳೆದ ಬಾರಿ ಉತ್ತಮವಾದ ಬೆಲೆ ಸಿಗಬಹುದೆಂದು ತಮ್ಮ ಜಮೀನಿನ ಜೊತೆಗೆ ಇತರ ಜಮೀನನ್ನು ಗುತ್ತಿಗೆಗೆ ಮಾಡಿಕೊಂಡು ಬೇಸಾಯ ಮಾಡಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಶುಂಠಿಯು ಅಂರ್ರಾಷ್ಟಿçÃಯ ಮಟ್ಟದಲ್ಲಿ ಬೇಡಿಕೆ ಕಡಿಮೆ ಇದ್ದ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿಲ್ಲದೆ ಜಿಲ್ಲೆಯ ರೈತರು ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಈ ಬಾರಿ ಬಿತ್ತನೆ ಬೀಜದ ಬೆಲೆಯು ತೀರ ಕಡಿಮೆ ಅಂದರೆ ಒಂದು ಚೀಲ (೬೦ಕೆ.ಜಿ.ಗೆ) ಕೇವಲ ೮೫೦-೯೫೦ ರೂ. ಮಾತ್ರ ಇರುವುದರಿಂದ ಜಿಲ್ಲೆಯ ರೈತರು ಕಳೆದ ಬಾರಿ ನಷ್ಟವಾದರೂ ಸಹ ಈ ಬಾರಿ ಮತ್ತೆ ಶುಂಠಿ ಬೇಸಾಯದಲ್ಲಿ ತೊಡಗಿದ್ದಾರೆ.
ಕಳೆದ ಬಾರಿ ಚೀಲಕ್ಕೆ ರೂ.೪,೦೦೦ ಇದ್ದುದು ಈ ಬಾರಿ ಕೇವಲ ರೂ. ೮೫೦ ಆಗಿದೆ. ಇದರಿಂದಾಗಿ, ಶುಂಠಿ ಬಿತ್ತನೆ ಬೀಜಕ್ಕೆ ನೀಡುವ ಹಣದಲ್ಲಿ ಐದು ಎಕರೆಗಳಷ್ಟು ಪ್ರದೇಶದಲ್ಲಿ ಬೇಸಾಯ ಮಾಡಬಹುದು ಎಂದು ಸೀಗೆಹೊಸೂರು ಗ್ರಾಮದ ಪ್ರಗತಿಪರ ರೈತರುಗಳಾದ ವಿಶ್ವನಾಥ, ಚಂದ್ರಶೇಖರ, ರಾಜಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಕುಶಾಲನಗರ ಹೋಬಳಿ ವ್ಯಾಪ್ತಿಯ ನೂರಾರು ಗ್ರಾಮಗಳ ಜೊತೆಯಲ್ಲಿ ಸಮೀಪದ ಪಿರಿಯಾಪಟ್ಟಣ ಹಾಸನ ಜಿಲ್ಲೆಯ ಕೆಲ ಪ್ರದೇಶದ ಹೊಲದ ಶುಂಠಿ ಬಿತ್ತನೆ ಬೀಜವನ್ನು ತಂದು ಅವುಗಳಿಗೆ ರೋಗ ಹರಡದಂತೆ ರಾಸಾಯನಿಕ ಔಷಧಿಗಳನ್ನು ಹಾಕಿ ಮೊಳಕೆ ಬರಿಸಿದ ನಂತರ ಬಿತ್ತನೆ ಮಾಡಲು ಈ ಭಾಗದ ನೂರಾರು ಗ್ರಾಮಗಳ ರೈತರು ಸಿದ್ಧರಾಗಿದ್ದಾರೆ.
ನೀರಾವರಿ ಸೌಲಭ್ಯ
ಶುಂಠಿ ಬೇಸಾಯಕ್ಕೆ ಪ್ರಮುಖವಾಗಿ ನೀರಾವರಿ ಸೌಲಭ್ಯ ವ್ಯವಸ್ಥೆ ಬೇಕಾಗುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಸರಕಾರದ ವಿವಿಧ ಯೋಜನೆಯ ಅಡಿಯಲ್ಲಿ ಕೊಳವೆ ಬಾವಿಯನ್ನು ತಮ್ಮ ತಮ್ಮ ಜಮೀನಿನಲ್ಲಿ ಕೊರೆಸಿಕೊಂಡಿದ್ದಾರೆ. ಇದರಿಂದಾಗಿ ಅಂತರ್ಜಲ ಉತ್ತಮವಾಗಿರುವು ದರಿಂದ ನೀರಿನ ಸೌಲಭ್ಯಗಳು ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ನೂರಾರು ರೈತರು ಶುಂಠಿ ಬೇಸಾಯದಲ್ಲಿ ತೊಡಗಿದ್ದಾರೆ. ಈ ಬಾರಿ ಉತ್ತಮವಾದ ಬೆಳೆ ಬಂದರೆ ಉತ್ತಮವಾದ ಬೆಲೆ ಸಿಕ್ಕಿದಲ್ಲಿ ಒಂದೇ ಬಾರಿ ಹಣ ಸಿಗುವುದರಿಂದ ಆರ್ಥಿಕವಾಗಿ ಮುಂದುವರಿಯಲು ಅನುಕೂಲವಾಗುತ್ತದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗಿನಲ್ಲಿ ಈ ಹಿಂದೆ ಅತಿ ಕಡಿಮೆ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಶುಂಠಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಇತರ ಬೆಳೆಗಳಲ್ಲಿ ಸಿಗುವದಕ್ಕಿಂತ ಹೆಚ್ಚಿನ ಆದಾಯ ದೊರೆಯುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರೈತರು ಶುಂಠಿ ಬೆಳೆಯತ್ತ ವಾಲುತ್ತಿದ್ದಾರೆ.
(ಮೊದಲ ಪುಟದಿಂದ)
ಜಿಲ್ಲೆಯಲ್ಲಿ ಶುಂಠಿ ಉತ್ಪಾದನೆ
ಜಿಲ್ಲಾ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ಅವರ ಮಾಹಿತಿಯಂತೆ ಕೊಡಗಿನಲ್ಲಿ ಸುಮಾರು ೧೬೦೦ ಹೆಕ್ಟೇರ್ಗಳಷ್ಟು ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಸುಮಾರು ೧೯,೭೪೦ ಮೆ.ಟನ್ ಗಳಷ್ಟು ಶುಂಠಿ ಉತ್ಪಾದನೆಯಾಗುತ್ತಿದೆ. ಮಡಿಕೇರಿ ತಾಲೂಕಿನಲ್ಲಿ ೧೧೨ ಹೆಕ್ಟೇರ್ ಪ್ರದೇಶದಲ್ಲಿ ೧೯೨೦ ಮೆ. ಟನ್ ಶುಂಠಿ ಉತ್ಪಾದಿಸಲಾಗುತ್ತಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೧,೧೩೮ ಹೆಕ್ಟೇರ್ ಪ್ರದೇಶದಲ್ಲಿ ೧೩,೬೫೬ ಮೆ. ಟನ್ ಶುಂಠಿ ಬೆಳೆಯಲಾಗುತ್ತಿದೆ. ವೀರಾಜಪೇಟೆ ತಾಲೂಕಿನಲ್ಲಿ ೩೪೭ ಹೆಕ್ಟೇರ್ ಪ್ರದೇಶದಲ್ಲಿ ೪,೧೬೪ ಮೆ.ಟನ್ ಶುಂಠಿ ಉತ್ಪ್ಪಾದಿಸಲಾಗುತ್ತಿದೆ.
ಸಲಹೆ-ಮಾರ್ಗದರ್ಶನ ಪಡೆಯರಿ
ಕೊಡಗಿನ ಶುಂಠಿ ಬೆಳೆಗಾರರು ಸಕಾಲಿಕವಾಗಿ ಸೂಕ್ತ ಮಾರ್ಗ ದರ್ಶನ-ಸಲಹೆ ಪಡೆಯುವಂತೆ ಅಪ್ಪಂಗಳ ಭಾರತೀಯ ಸಂಬಾರ ಬೆಳೆೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ (ಐ.ಸಿ.ಎ.ಆರ್À) ದ ಪ್ರಮುಖರಾದ ಎಸ್. ಜೆ. ಅಂಕೇಗೌಡ “ಶಕ್ತಿ” ಮೂಲಕ ಅಭಿಪ್ರಾಯಪಟ್ಟಿದ್ದಾರೆ. ಅನೇಕ ಸಂದರ್ಭ ಸಮರ್ಪಕ ಪರಿಜ್ಞಾನವಿಲ್ಲದವರ ಮಾತು ಕೇಳಿ ಬೆಳೆÉಗಾರರು ನಷ್ಟ ಅನುಭವಿಸಿದ್ದೂ ಕಂಡುಬAದಿದೆ. ಸಮರ್ಪಕವಾಗಿ, ವೈಜ್ಞಾನಿಕವಾಗಿ ಮಾರ್ಗದರ್ಶನ ಪಡೆದು ಬೆಳೆ ಬೆಳೆದರೆ ಇದು ಉತ್ತಮ ಲಾಭsದಾಯಕ ಕೃಷಿಯಾಗುತ್ತದೆ. ಅನೇಕ ಸಂದರ್ಭ ಒಂದು ಗ್ರಾಮದಲ್ಲಿ ಬಹಳಷ್ಟು ಶುಂಠಿ ಬೆಳೆಗಾರರಿದ್ದರೆ ನಾವೇ ಅಂತಹ ಕಡೆ ಹೋಗಿ ಮಾರ್ಗದರ್ಶನ ನೀಡಿದ್ದೇವೆ. ಬೆಳೆಗಾರರು ಯಾವದೇ ಸಂದರ್ಭದಲ್ಲಿ ನಮ್ಮ ಸಲಹೆ- ಮಾರ್ಗದರ್ಶನ ಬೇಕಿದ್ದಲ್ಲಿ ನೀಡಲಿದ್ದೇವೆ ಎಂದು ಅವರು ಭರವಸೆಯಿತ್ತಿದ್ದಾರೆ.
ಕೊಡಗಿಗೆ ಪೂರಕ ತಳಿ ಬೆಳೆಸಿ
ಉದಾಹರಣೆಗೆ ಕೊಡಗಿನಲ್ಲಿ ಬಹುತೇಕ ಬೆಳೆಗಾರರು ವಿದೇಶೀ ತಳಿಯಾದ ರಿಯೋ-ಡಿ-ಜನೈರೋ ತಳಿಯನ್ನು ಬೆಳೆಸುತ್ತಿದ್ದಾರೆ. ಆದರೆ, ಅಂಕೇಗೌಡ ಅವರ ಪ್ರಕಾರ ಈ ತಳಿಗೆ ತ್ವರಿತವಾಗಿ ರೋಗ ಬಾಧೆಯುಂಟಾಗುತ್ತದೆ. ಕೊಡಗು ಜಿಲ್ಲೆಯ ಹವಾಮಾನಕ್ಕೆ ಈ ತಳಿ ಅಷ್ಟು ಪೂರಕವಾಗಿಲ್ಲ. ಬದಲಿಗೆ ಕೊಡಗಿನಲ್ಲಿ ವರದ ತಳಿ ಬೆಳೆ ಸೂಕ್ತವಾಗಿದೆ. ವರದ ತಳಿಯು ತಾಜಾ ಶುಂಠಿ, ಒಣ ಶುಂಠಿ ಹಾಗೂ ಕ್ಯಾಂಡಿ ಮಾಡಲು ಸೂಕ್ತವಾಗಿದೆ. ಇನ್ನೊಂದು ತಳಿ ರಜತ ಎನ್ನುವ ತಳಿಯು ಕೊಡಗಿಗೆ ಸೂಕ್ತವಾಗಿದೆ. ಇದರಲ್ಲಿ ಅಗತ್ಯ ತೈಲ ಲಭ್ಯವಾಗುತ್ತದೆ. ಮತ್ತೊಂದು ತಳಿ ಮಹಿಮ ಕೂಡ ಕೊಡಗು ಜಿಲ್ಲೆಗೆ ಸೂಕ್ತವಾಗಿದೆ ಎಂದು ಅಂಕೇಗೌಡ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ಶುಂಠಿ ಬೆಳೆಯಲ್ಲಿ ಮುಖ್ಯವಾಗಿ ರೋಗ ಬಾಧೆ ನಿಯಂತ್ರಣ ಅತ್ಯಗತ್ಯವಾಗಿದ್ದು ಇದಕ್ಕೆ ಪೂರಕ ತಳಿ ಬೆಳೆಯಬೇಕು. ಅಲ್ಲದೆ, ಆಗಿಂದಾಗ್ಗೆ ಸಕಾಲಿಕವಾಗಿ ನಿರ್ದಿಷ್ಟ ರಾಸಾಯನಿಕಗಳ ಸಿಂಪಡನೆಯಿAದ ನಿಯಂತ್ರಣ ಮಾಡಬೇಕು. ಆ ಮೂಲಕ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಅಂಕೇಗೌಡ “ಶಕ್ತಿ’’ ಮೂಲಕ ರೈತರ ಗಮನಕ್ಕೆ ತಂದಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ / ಜಿ.ಆರ್.