ಮಡಿಕೇರಿ, ಮಾ. ೩೦: ರಾಜ್ಯ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷರು ಮತ್ತು ರಾಜ್ಯ ಸಭೆಯ ಸದಸ್ಯರು ಆಗಿರುವ ಈರಣ್ಣ ಕಡಾಡಿ ಅವರ ಪತ್ರಕ್ಕೆ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ಪ್ರಸಾರ ಭಾರತಿ ಸಚಿವರಾದ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿದ್ದಾರೆ.
ಲಭ್ಯವಾದ ಪತ್ರದ ಪ್ರಕಾರ ಕೃಷಿ ಮೋರ್ಚಾದ ಅಧ್ಯಕ್ಷರಾದ ಈರಣ್ಣ ಕಡಾಡಿ ಅವರು ತಮ್ಮ ಕೊಡಗು ಪ್ರವಾಸದ ವೇಳೆ ವೀರಾಜಪೇಟೆ ತಾಲೂಕಿನಲ್ಲಿ ಹುಲಿ ಹಾವಳಿ ಮತ್ತು ಕೊಡಗಿನಲ್ಲಿ ಹೆಚ್ಚಾಗಿರುವ ಮಾನವ ವನ್ಯಜೀವಿ ವಿಶೇಷವಾಗಿ ಆನೆ-ಮಾನವ ಸಂಘರ್ಷದ ಕುರಿತು ಕೇಂದ್ರ ಮಂತ್ರಿಗಳಿಗೆ ಪತ್ರ ಬರೆದಿದ್ದರು.
ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ವನ್ಯಜೀವಿ ನಿರ್ವಹಣೆ ರಾಜ್ಯ ಸರ್ಕಾರದ ಅರಣ್ಯ ಇಲಾಖೆಗೆ ಬರುತ್ತಿದ್ದು, ಈ ಕುರಿತು ಸೂಕ್ತ ಕ್ರಮ ವಹಿಸುವಂತೆ ರಾಜ್ಯಗಳ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ರಾಜ್ಯ ಬಿಜೆಪಿ ಕೃಷಿ ಮೋರ್ಚಾದ ಪರವಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದ ಈರಣ್ಣ ಕಡಾಡಿಯವರು ಕೊಡಗಿಗೂ ಬಂದಿದ್ದರು. ಈ ಸಂದರ್ಭದಲ್ಲಿ ಸಭೆ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಅವರಿಗೆ ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷದ ಕುರಿತು ಗಮನ ಸೆಳೆಯಲಾಗಿತ್ತಲ್ಲದೆ ಮನವಿ ಅಹವಾಲುಗಳನ್ನು ಸಲ್ಲಿಸಲಾಗಿತ್ತು. ಹಾಗೆಯೇ ಕೊಡಗು ಮತ್ತು ಪಕ್ಕದ ಜಿಲ್ಲೆಗಳಲ್ಲಿ ಕೂಡ ಅವರು ಪ್ರವಾಸ ಮಾಡಿದ ಸಂದರ್ಭ ಇದೇ ವಿಷಯದ ಕುರಿತಾಗಿ ಸಾಕಷ್ಟು ಮನವಿ ಮತ್ತು ಅಹವಾಲು ಅವರಿಗೆ ಬಂದಿದ್ದನ್ನು ಅವರು ಕ್ರೋಡೀಕರಿಸಿ ಕೇಂದ್ರ ಸಚಿವರಿಗೆ ಈ ವರ್ಷದ ಜ. ೩೦ ರಂದು ಪತ್ರ ಬರೆದು ಸಹಕಾರ ಮತ್ತು ಸ್ಪಂದನೆಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.