ಮಡಿಕೇರಿ, ಮಾ. ೩೦: ನಗರಸಭಾ ವ್ಯಾಪ್ತಿಯ ವಿವಿಧ ಬಡಾವಣೆ ವ್ಯಾಪ್ತಿಯಲ್ಲಿ ಸುಮಾರು ರೂ. ೯೮.೮೯ ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ರಂಜನ್, ಮಡಿಕೇರಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗಿದೆ. ನಗರದ ಎಲ್ಲಾ ಬಡವಾಣೆಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವು ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದರು. ಇನ್ನು ರೂ. ೪೫-೫೦ ಲಕ್ಷ ವೆಚ್ಚದ ಕಾಮಗಾರಿ ಕೈಗೊಳ್ಳಲು ಟೆಂಡರ್ ಆಹ್ವಾನಿಸಲಾಗಿದೆ. ನಗರದ ಎಲ್ಲಾ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ೩ ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ ೭ ಮಂದಿ ಮೃತಪಟ್ಟಿದ್ದಾರೆ. ರಸ್ತೆ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಬೇಕು ಎಂದು ಶಾಸಕರು ಕೋರಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ , ನಗರಸಭಾ ಪೌರಾಯುಕ್ತ ರಾಮದಾಸ್ ಮತ್ತು ಸಹಾಯಕ ಇಂಜಿನಿಯರ್ ಪದ್ಮನಾಭ ರೆಡ್ಡಿ, ಕಿರಿಯ ಇಂಜಿನಿಯರ್ ಸಮಂತ್ ಕುಮಾರ್ ಹೆಚ್.ಆರ್ ಪ್ರಮುಖರಾದ ಪಿ.ಡಿ. ಪೊನ್ನಪ್ಪ, ಟಿ.ಎಸ್. ಪ್ರಕಾಶ್, ಕೆ.ಎಸ್. ರಮೇಶ್, ಮಹೇಶ್ ಜೈನಿ, ಶಿವಕುಮಾರಿ, ಅನಿತಾ ಪೂವಯ್ಯ, ಸವಿತಾ ರಾಕೇಶ್, ಮನು ಮಂಜುನಾಥ್, ಬಿ.ಕೆ. ಜಗದೀಶ್, ಬಿ.ಎಂ. ರಾಜೇಶ್, ಅರುಣ್ ಕುಮಾರ್, ಭಾರತಿ, ಕನ್ನಿಕೆ, ಕಲಾವತಿ ಇತರರು ಇದ್ದರು.
ಕಾಮಗಾರಿ ವಿವರ : ಮಡಿಕೇರಿ ನಗರಸಭೆ ವ್ಯಾಪ್ತಿಯ ಗೌಳಿ ಬೀದಿಯ ಸುರೇಶ್ ಅವರ ಮನೆ ಹತ್ತಿರ ಸಿ.ಸಿ. ಚರಂಡಿ, ಜಲಾಶ್ರಯ ಬಡಾವಣೆಯಲ್ಲಿನ ಶರವಣ ಅವರ ಮನೆ ಹತ್ತಿರ ಸಿ.ಸಿ. ಕಲ್ವರ್ಟ್ ಕಾಮಗಾರಿ, ಬ್ರಹ್ಮಕುಮಾರಿ ಕಟ್ಟಡ ದಾಸವಾಳ ಬಡಾವಣೆಯ ಹತ್ತಿರ ಬ್ರಹ್ಮಕುಮಾರಿ ಕಟ್ಟಡದ ಹತ್ತಿರ ಸಿ.ಸಿ. ಚರಂಡಿ ಅಭಿವೃದ್ಧಿ ಕಾಮಗಾರಿ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಹಿಂಭಾಗದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ, ಟಿ. ಜಾನ್ ಬಡಾವಣೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ, ಕೇಂದ್ರಿಯ ವಿದ್ಯಾಲಯ ಮುಂಭಾಗದ ರಸ್ತೆ ಅಭಿವೃದ್ಧಿ, ಪೆನ್ಸ್ನ್ಲೇನ್ನಲ್ಲಿರುವ ನಗರಸಭೆ ವಸತಿ ಗೃಹಗಳ ಆಧುನೀಕರಣ ಕಾಮಗಾರಿ, ಅಜಾದ್ ನಗರದ ಕುಮಾರ್ ಮನೆಯ ಹತ್ತಿರ ತಡೆಗೋಡೆ ನಿರ್ಮಾಣ ಕಾಮಗಾರಿ, ರಾಣಿಪೇಟೆ ಪಾರ್ಕ್ ಮತ್ತು ಕಾವೇರಿ ಲೇಔಟ್ ಪಾರ್ಕ್ನಲ್ಲಿ ಸುಣ್ಣ ಬಣ್ಣ ಬಳಿಯುವ ಕಾಮಗಾರಿ. ಹೊಸಬಡಾವಣೆಯಲ್ಲಿರುವ ಸ್ಮಶಾನ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಹಾಗೆಯೇ ಕಾವೇರಿ ಬಡಾವಣೆ ಒಳಭಾಗದ ರಸ್ತೆ ಮರು ಡಾಂಬರೀಕರಣ ಕಾಮಗಾರಿ, ಟಿ. ಜಾನ್ ಬಡಾವಣೆ ಒಳಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಸುದರ್ಶನ ಅತಿಥಿ ಗೃಹ ಬಳಿ ೧ ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಣಗಾರ ನಿರ್ಮಾಣ ಕಾಮಗಾರಿಯನ್ನು ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಉದ್ಘಾಟಿಸಿದರು.