ಸೋಮವಾರಪೇಟೆ, ಮಾ. ೩೦: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ೨೦೨೧-೨೨ನೇ ಸಾಲಿನ ಬಜೆಟ್ ಸಭೆಯಲ್ಲಿ ಅಧ್ಯಕ್ಷೆ ನಳಿನಿ ಗಣೇಶ್ ಅವರು ೨.೨೭ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.

ಮೂಲಭೂತ ಸೌಕರ್ಯ, ಘನತಾಜ್ಯ ವಿಲೇವಾರಿ, ಸ್ಮಶಾನ, ಪಾರ್ಕ್ಗಳ ಅಭಿವೃದ್ಧಿ, ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಭೂಮಿ ಖರೀದಿಸುವುದು ಸೇರಿದಂತೆ, ೧೦೪೨.೯೩ಲಕ್ಷ ರೂ.ನ ಬಜೆಟ್ ಮಂಡಿಸಿದ್ದು, ೨.೨೭ಲಕ್ಷ ರೂ.ಗಳ ಉಳಿತಾಯ ನಿರೀಕ್ಷಿಸಲಾಗಿದೆ.

ವೇತನ ಅನುದಾನದಿಂದ ೧೨೫ಲಕ್ಷ ರೂ., ೧೫ನೇ ಹಣಕಾಸು ಯೋಜನೆಯಿಂದ ೭೦ಲಕ್ಷ ರೂ., ಎಸ್‌ಎಫ್‌ಸಿಯಿಂದ ೩೦ಲಕ್ಷ ರೂ., ಎಸ್‌ಎಫ್‌ಸಿ ವಿಶೇಷ ಅನುದಾನದಿಂದ ೧ ಕೋಟಿ ರೂ., ಘನತಾಜ್ಯ ನಿರ್ವಹಣೆಗಾಗಿ ೨ಕೋಟಿ ರೂ., ಬರಪರಿಹಾರ ನಿಧಿಯಿಂದ ೧೫ ಲಕ್ಷ ರೂ., ವಿದ್ಯುತ್ ಅನುದಾನ ೧.೩೦ಕೋಟಿ ರೂ., ಮಳೆಹಾನಿ ಪರಿಹಾರ ನಿಧಿಯಿಂದ ೧ ಕೋಟಿ ರೂ., ಆಸ್ತಿ ತೆರಿಗೆಯಿಂದ ೪೫ಲಕ್ಷ ರೂ., ವಾಣಿಜ್ಯ ಮಳಿಗೆ ಬಾಡಿಗೆಯಿಂದ ೪೦ಲಕ್ಷ ರೂ., ನೀರಿನ ತೆರಿಗೆಯಿಂದ ೨೫ಲಕ್ಷ ರೂ., ಪರಿಶಿಷ್ಟ ಜಾತಿ ಪಂಗಡದ ಶ್ರೇಯೋಭಿವೃದ್ಧಿಗಾಗಿ ೯.೪೫ಲಕ್ಷ ರೂ., ಇತರ ಬಡಜನರ ಕಲ್ಯಾಣನಿಧಿ ೨.೮೩ ಲಕ್ಷ ರೂ., ಅಂಗವಿಕಲ ಕ್ಷೇಮಾಭಿವೃದ್ಧಿಯಿಂದ ೧.೯೫ಲಕ್ಷ ರೂ. ಹೀಗೆ ವಿವಿಧ ಮೂಲಗಳಿಂದ ೧೦೪೨.೭೦ಲಕ್ಷ ರೂಗಳ., ಆದಾಯ ನಿರೀಕ್ಷಿಸಲಾಗಿದೆ.

ನೀರು ಸರಬರಾಜಿಗೆ ೫೦ ಲಕ್ಷ ರೂ., ರಸ್ತೆ ದುರಸ್ತಿಗೆ ೭೫ಲಕ್ಷ ರೂ., ಚರಂಡಿ ನಿರ್ಮಾಣಕ್ಕೆ ೭೫ ಲಕ್ಷ ರೂ., ತಡೆಗೋಡೆಗೆ ೨೫ಲಕ್ಷ ರೂ., ನೀರು ಸರಬರಾಜಿಗೆ ೭೫ಲಕ್ಷ ರೂ., ಮಳಿಗೆ ದುರಸ್ತಿಗೆ ೨೫ಲಕ್ಷ ರೂ., ಘನತಾಜ್ಯ ವಿಲೇವಾರಿಗೆ ೨ಕೋಟಿ ರೂ., ಕೆರೆ ಅಭಿವೃದ್ಧಿಗೆ ೨ಲಕ್ಷ ರೂ., ನಿವೇಶನ ರಹಿತರಿಗೆ ನಿವೇಶನ ಖರೀದಿಸಲು ೧ಕೋಟಿ ರೂ., ದಾರಿ ದೀಪಗಳ ದುರಸ್ತಿಗೆ ೧೦ಲಕ್ಷ ರೂ., ಸೇರಿದಂತೆ ಒಟ್ಟು ೧೦೩೯.೯೩ಲಕ್ಷ ರೂ. ಗಳ ಖರ್ಚನ್ನು ಅಂದಾಜಿಸಲಾಗಿದೆ.

ಕಸಮುಕ್ತ ಪಟ್ಟಣದ ಗುರಿಯಿದೆ. ಕುಡಿಯುವ ನೀರಿನ ಸಮಸ್ಯೆ ತಲೆÀದೋರದಂತೆ ಎಚ್ಚರಿಕೆ ಕ್ರಮಗಳು, ಪೌರಕಾರ್ಮಿಕರಿಗೆ ವಸತಿ ಗೃಹಗಳ ನಿರ್ಮಾಣ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡುವ ಗುರಿಯಿದೆ. ಇದೇ ಮೊದಲ ಬಾರಿಗೆ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ೫೦ಸಾವಿರ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ ಎಂದು ಅಧ್ಯಕ್ಷೆ ನಳಿನಿ ಗಣೇಶ್ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಬಿ.ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್,ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಉದಯಶಂಕರ್, ನಾಗರತ್ನ, ಜೀವನ್, ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಶುಭಾಕರ್, ನಾಮನಿರ್ದೇಶನ ಸದಸ್ಯರಾದ ಎಸ್. ಮಹೇಶ್, ಎಸ್.ಆರ್. ಸೋಮೇಶ್, ಶರತ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಇಂಜಿನಿಯರ್ ಹೇಮಕುಮಾರ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.