*ಗೋಣಿಕೊಪ್ಪ, ಮಾ. ೩೦: ಎರಡು ದಶಕಗಳಿಂದ ಡಾಂಬರು ಕಾಣದ ರಸ್ತೆ, ದಾರಿಯುದ್ದಕ್ಕೂ ತಗ್ಗು-ದಿಣ್ಣೆಗಳದ್ದೇ ದರ್ಬಾರ್, ವಾಹನ ಸಂಚಾರ ಇರಲಿ, ಪಾದಚಾರಿಗಳು ಓಡಾಡುವುದೇ ಕಷ್ಟ. ಇದು ಪೊನ್ನಂ ಪೇಟೆ ತಾಲೂಕಿನ ದೇವರಪುರ ಗ್ರಾಮ ಪಂಚಾಯಿತಿ ಒಳಪಡುವ ಶ್ರೀ ಅಯ್ಯಪ್ಪ ಭದ್ರಕಾಳಿ ದೇವಸ್ಥಾನಕ್ಕೆ ಹೋಗುವ ಮಾರ್ಗದ ಸ್ಥಿತಿ.
ದಕ್ಷಿಣ ಕೊಡಗಿನಲ್ಲಿ ಅಶ್ಲೀಲ ಬೈಗುಳಗಳಿಗೆ ಖ್ಯಾತಿಯಾದ ವಿಶಿಷ್ಟವಾದ ಬುಡಕಟ್ಟು ಜನರ ಬೇಡು ಹಬ್ಬ ನಡೆಯುವ ದೇವಸ್ಥಾನದ ರಸ್ತೆ ಹಾಗೂ ದೇವರಕಾಡು ಹಾಡಿಗೆ ಸಂಚರಿಸುವ ಮಾರ್ಗ ಇದಾಗಿದ್ದು, ಇಲ್ಲಿನ ವ್ಯವಸ್ಥೆ ಜನಪ್ರತಿನಿಧಿಗಳನ್ನು ಮತ್ತು÷ ಅಧಿಕಾರಿಗಳನ್ನು ಅಣಕಿಸುತ್ತಿದೆ.
ರಸ್ತೆ ಹಾಳಾಗಿ ದಶಕಗಳು ಕಳೆದರೂ ಅಭಿವೃದ್ಧಿ ಮಾತ್ರ ಕಂಡಿಲ್ಲ. ಕಳೆದ ಕೆಲ ವರ್ಷಗಳಿಂದ ರಸ್ತೆ ಅಗೆದು ಅಲ್ಲಲ್ಲಿ ಒಂದಿಷ್ಟು ಜೆಲ್ಲಿ ಕಲ್ಲು ಹಾಕಿ ಮಣ್ಣು ಹಾಕಿದ ಸಮಾಧಾನ ಬಿಟ್ಟರೆ ಉಳಿದ ಕೆಲಸ ಇನ್ನೂ ಅಪೂರ್ಣ ವಾಗಿದೆ. ಇದರಿಂದ ರಸ್ತೆ ಹದಗೆಟ್ಟಿದ್ದು, ಸಂಚಾರ ಮಾಡಲು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ಡಾಂಬರ್ ಕಿತ್ತು ಹೋಗಿದ್ದು, ಜಲ್ಲಿ ಕಲ್ಲುಗಳೇ ವಿಪರೀತವಾಗಿದೆ. ಹಾಡಿಯ ಜನರು ಪ್ರತಿಯೊಂದು ಕೆಲಸಕ್ಕೂ ಪಟ್ಟಣವನ್ನು ಆಶ್ರಯಿಸಿದ್ದಾರೆ. ಹದಗೆಟ್ಟ ರಸ್ತೆ ಮೇಲೆ ಸಂಚರಿಸಲು ಪ್ರಯಾಣಿಕರಿಗೆ, ವಾಹನಗಳಿಗೂ ತೊಂದರೆಯಾಗುತ್ತಿವೆ. ಈ ಕಾರಣದಿಂದ ಈ ಮಾರ್ಗದಲ್ಲಿ ಹೆಚ್ಚು ಬಾಡಿಗೆ ನೀಡುತ್ತೇವೆ ಎಂದರೂ ಆಟೋರಿಕ್ಷಾಗಳು ಸಂಚರಿಸಲು ಮುಂದಾಗುವುದಿಲ್ಲ. ಈ ರಸ್ತೆಯ ದುಸ್ಥಿತಿಯಿಂದ ಆಟೋದಲ್ಲಿ ಸಂಚರಿಸಿದಾಗ ಗರ್ಭಿಣಿಯರು ಮಾರ್ಗದಲ್ಲಿ ಸಂಚರಿಸುವಾಗ ಹೆರಿಗೆಯಾದ ಘಟನೆಗಳು ನಡೆದಿದೆ. ವಯಸ್ಕರು, ಮಕ್ಕಳು ಅನಾರೋಗ್ಯಕ್ಕೆ ಒಳಗಾದವರು ಈ ಮಾರ್ಗದಲ್ಲಿ ಸಂಚರಿಸಲು ಅಸಾಧ್ಯವಾಗಿದೆ.
ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಕುಂಟುತ್ತಾ, ತೆವಳುತ್ತಾ ಸಾಗುವ ಪರಿಸ್ಥಿತಿ ನಿಮಾರ್ಣ ವಾಗಿದೆ. ಈ ರಸ್ತೆಯ ಅಭಿವೃದ್ಧಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರೂ, ಈ ರಸ್ತೆ ಮಾತ್ರ ಇಲ್ಲಿಯೆವರೆಗೆ ಸುಧಾರಣೆ ಕಂಡಿಲ್ಲ. ರಸ್ತೆಯ ಜೊತೆಗೆ ಮೂಲಭೂತ ಸೌಕರ್ಯಗಳಿಂದಲೂ ವಂಚಿತ ರಾಗಿದ್ದು, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯು ಇಲ್ಲ ಎಂದು ಅಲ್ಲಿನ ನಿವಾಸಿ ರಾಜು ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.
-ಎನ್.ಎನ್. ದಿನೇಶ್