ಸಿದ್ದಾಪುರ, ಮಾ. ೩೦: ನೆಲ್ಲಿಹುದಿಕೇರಿಯ ಸ್ವರ್ಣ ಕ್ಲಿನಿಕ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ನೆಲ್ಲಿಹುದಿಕೇರಿಯ ಹಿರಿಯ ಅರ್ಚಕ ಶಂಕರ್ ನಾರಾಯಣ ಅವರು ಉದ್ಘಾಟಿಸಿದರು.

ಅತಿಥಿಯಾಗಿ ಆಗಮಿಸಿದ್ದ ನೀಮಾ ಸಂಘಟನೆಯ ಅಧ್ಯಕ್ಷ ಡಾ. ರಾಜಾರಾಮ್ ಮಾತನಾಡಿ, ಕೊರೊನಾ ಮಹಾಮಾರಿಗೆ ದೇಶವೇ ನಲುಗಿದ್ದು, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಕ್ಷೇತ್ರವು ನಷ್ಟದಲ್ಲಿ ಸಾಗುತ್ತಿದೆ. ಈ ನಡುವೆಯೂ ಕೂಡ ಸಾಮಾಜಿಕ ಕಾಳಜಿಯೊಂದಿಗೆ ಸ್ವರ್ಣ ಕ್ಲಿನಿಕ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ಬೆನಕ ಹೆಲ್ತ್ ಕ್ಲಿನಿಕ್‌ನ ಡಾ. ಉದಯ ಶಂಕರ್ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮದ ಬಡ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಈ ಸಂದರ್ಭ ಸ್ವರ್ಣ ಕ್ಲಿನಿಕ್ ವೈದ್ಯ ಡಾ. ಉದಯ ಕುಮಾರ್, ಗ್ರಾಮದ ಪ್ರಮುಖರಾದ ಟಿ.ಸಿ. ರಾಮನ್ ಕುಟ್ಟಿ, ವಸಂತ ಕುಮಾರ್, ಟಿ.ಸಿ. ಅಶೋಕ್ ಇನ್ನಿತರರು ಹಾಜರಿದ್ದರು.