(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮಾ. ೩೦: ಕೊಡಗು ಜಿಲ್ಲೆಯ ಪ್ರಮುಖ ಪಟ್ಟಣಗಳಾದ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ತಾ. ೨೯ ರಂದು ನಡೆದಿರುವ ಚುನಾವಣೆಯ ಮತ ಎಣಿಕೆ ಕಾರ್ಯ ತಾ. ೩೧ (ಇಂದು) ನಡೆಯಲಿದ್ದು, ಈ ಫಲಿತಾಂಶದೊAದಿಗೆ ಮುಂದಿನ ೫ ವರ್ಷಗಳ ಅವಧಿಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ನಿರ್ಧಾರವಾಗಲಿದೆ. ಗೋಣಿಕೊಪ್ಪ ಪಂಚಾಯಿತಿಯ ೨೧ ಸ್ಥಾನಗಳಿಗೆ ಹಾಗೂ ಪೊನ್ನಂಪೇಟೆಯ ೧೯ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅವಳಿ ಪಂಚಾಯಿತಿಯ ಕಣದಲ್ಲಿ ೧೦೧ ಅಭ್ಯರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಈ ಚುನಾವಣೆಯ ಫಲಿತಾಂಶ ಕೇವಲ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ ತಮ್ಮ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಎರಡು ಪಂಚಾಯಿತಿಗಳಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ವಿವಿಧ ಭಾಗದಿಂದ ಆಗಮಿಸಿದ ಪಕ್ಷದ ಮುಖಂಡರು ಈ ಚುನಾವಣೆಗಳಲ್ಲಿ ಜವಾಬ್ದಾರಿ ವಹಿಸಿಕೊಂಡು ತಮಗೆ ವಹಿಸಿರುವ ಬ್ಲಾಕ್‌ಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಫಲಿತಾಂಶಕ್ಕಾಗಿ ಕಾತರ ಹೆಚ್ಚಾಗಿದೆ. ಎಲ್ಲಾ ಅಭ್ಯರ್ಥಿಗಳು ತಾವು ಎದುರಿಸಿರುವ ವಾರ್ಡ್ಗಳಲ್ಲಿ ಮತದಾರರು ನೀಡಿರುವ ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಎದೆಯಲ್ಲಿ ಡವಡವ ಶುರುವಾಗಿದೆ. ಇಂತದ್ದೇ ಅಭ್ಯರ್ಥಿಗಳು ಗೆದ್ದೆ ಗೆಲ್ಲುತ್ತಾರೆಂದು ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ.

ಪೊನ್ನಂಪೇಟೆಯಲ್ಲಿ ೨೦ ಸ್ಥಾನಗಳಿಗೆ ೫೦ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಗೊಂಡಿದ್ದರೂ ಚುನಾವಣಾ ಅಧಿಕಾರಿಗಳು ಇಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಗೋಣಿಕೊಪ್ಪ ಪಂಚಾಯಿತಿಯಲ್ಲಿ ೨೧ ಸ್ಥಾನಕ್ಕೆ ೫೧ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೆಲವೆಡೆ ಸ್ವತಂತ್ರ ಅಭ್ಯರ್ಥಿಗಳು ಅಚ್ಚರಿಯ ಫಲಿತಾಂಶ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಮತಪೆಟ್ಟಿಗೆಗಳನ್ನು ಬಿಗಿ ಬಂದೋಬಸ್ತ್ನಲ್ಲಿ ಎಣಿಕಾ ಕಾರ್ಯ ಸ್ಥಳವಾದ ಪೊನ್ನಂಪೇಟೆಯ ಐಟಿಐ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಭದ್ರತಾ ಕೊಠಡಿಗೆ ವಿಶೇಷ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.

೫ ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ಗೋಣಿಕೊಪ್ಪ ೩ ಟೇಬಲ್, ಪೊನ್ನಂಪೇಟೆ ೨ ಟೇಬಲ್‌ಗಳಲ್ಲಿ ಬೆಳಿಗ್ಗೆ ೮ ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ವಿವಿಧ ಇಲಾಖೆಗಳಿಂದ ಚುನಾವಣಾ ಅಧಿಕಾರಿಗಳು ಸೇರಿದಂತೆ ೫೦ ಸಿಬ್ಬಂದಿಗಳು ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಏಜೆಂಟ್ ಅಥವಾ ಅಭ್ಯರ್ಥಿಗೆ ಮತ ಎಣಿಕೆ ಕೊಠಡಿಗೆ ಪ್ರವೇಶ ನೀಡಲಾಗಿದೆ. ಕೋವಿಡ್-೧೯ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಚುನಾವಣಾಧಿಕಾರಿ ಯೋಗಾನಂದ್ ಹಾಗೂ ಪ್ರಭಾರ ತಹಶೀಲ್ದಾರ್ ಕಾವ್ಯರಾಣಿ ಮಾಹಿತಿ ನೀಡಿದ್ದಾರೆ.

ಅವಳಿ ಪಂಚಾಯಿತಿಗಳಲ್ಲಿ ನಡೆಯುವ ಚುನಾವಣೆಯನ್ನು ಸುಲಲಿತವಾಗಿ ನಡೆಸಲು ಡಿವೈಎಸ್ಪಿ ಜಯಕುಮಾರ್ ಮುಂದಾಳತ್ವದಲ್ಲಿ ೩ ಸರ್ಕಲ್ ಇನ್ಸ್ಪೆಕ್ಟರ್, ೭ ಸಬ್‌ಇನ್ಸ್ಪೆೆಕ್ಟರ್ ಸೇರಿದಂತೆ ೧೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ವಾಹನಗಳನ್ನು ತಾಲೂಕು ಕಚೇರಿ ಹಾಗೂ ಜೂನಿಯರ್ ಕಾಲೇಜ್ ಆವರಣದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಸಾಮಾನ್ಯ ಕ್ಷೇತ್ರ ಫಲಿತಾಂಶ ವಿಳಂಬ

ಗ್ರಾಮ ಪಂಚಾಯಿತಿಯ ಚುನಾವಣೆ ಮತ ಎಣಿಕೆಯ ಸಂದರ್ಭ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಸಿಎಂ (ಎ), ಬಿಸಿಎಂ (ಬಿ) ಮುಂತಾದ ಮೀಸಲು ಕ್ಷೇತ್ರಗಳ ಅಭ್ಯರ್ಥಿಗಳ ಮತ ಎಣಿಕೆಗೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಸಾಮಾನ್ಯ ಕ್ಷೇತ್ರಗಳ ಮತ ಎಣಿಕೆ ಸಹಜವಾಗಿಯೇ ವಿಳಂಬವಾಗಲಿದೆ.