ಮಡಿಕೇರಿ, ಮಾ. ೩೦: ಕೊಡಗು ಜಿಲ್ಲೆಯ ಏಕೈಕ ನಗರಸಭೆಯಾಗಿರುವದು ಮಡಿಕೇರಿ. ಇದು ಜಿಲ್ಲಾ ಕೇಂದ್ರವೂ ಆಗಿದೆ. ಆದರೆ ಈ ಮಡಿಕೇರಿ ನಗರಸಭೆಗೆ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಸುದೀರ್ಘ ಎರಡು ವರ್ಷವೇ ಕಳೆದು ಹೋಗಿದೆ, ೨೦೧೯ರ ಮಾರ್ಚ್ ೧೪ ರಂದು ಈ ಹಿಂದಿನ ಸಾಲಿನ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಗೊಂಡಿತ್ತು. ಬಳಿಕ ಒಂದೆರಡು ತಿಂಗಳಲ್ಲಿ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ರಚನೆಯಾಗಬೇಕಿತ್ತು. ಆದರೆ ಈ ಸಂದರ್ಭದಲ್ಲಿ ಮುಂದಿನ ಚುನಾವಣೆಗಾಗಿ ಸಿದ್ಧಪಡಿಸಲಾಗಿದ್ದ ವಾರ್ಡ್ವಾರು ಮೀಸಲಾತಿಯ ಕುರಿತಾಗಿ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಕಾರಣದಿಂದಾಗಿ ಕಾನೂನು ತೊಡಕಿನಿಂದಾಗಿ ಚುನಾವಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಗಳಾಗಿದ್ದರು.
ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದ ಕಾರಣದಿಂದಾಗಿ ನಂತರದ ದಿನಗಳಲ್ಲಿ ಇದು ಬಹುಶಃ ಸೂಕ್ತ ಪ್ರಯತ್ನಗಳು ನಡೆಯದೇ ಇದ್ದರಿಂದ ಒಂದಷ್ಟು ಗೊಂದಲದ ಪರಿಸ್ಥಿತಿ ಉಂಟಾಗಿ ಅಸ್ಪಷ್ಟತೆ ಕಾಡಿತ್ತು. ಈ ಅಸ್ಪಷ್ಟತೆಯ ಪರಿಸ್ಥಿತಿಯಿಂದಲೇ ಈ ತನಕವೂ ಚುನಾವಣೆ ಘೋಷಣೆಯಾಗಿರಲಿಲ್ಲ. ರಾಜ್ಯದ ಇನ್ನಿತರ ನಗರಸಭೆಗಳ ವಿಚಾರ ಇತ್ಯರ್ಥಗೊಂಡು ಚುನಾವಣೆ ಮುಗಿದರೂ ಮಡಿಕೇರಿ ನಗರಸಭೆ ಮಾತ್ರ ಬಾಕಿ ಉಳಿದಿತ್ತು. ಇದರ ನಡುವೆ ಮೀಸಲಾತಿ ಕುರಿತಾಗಿ ಇತ್ತೀಚೆಗೆ ಹೊಸದೊಂದು ನೋಟಿಫಿಕೇಷನ್ ಜಾರಿಯಾಗಿ
(ಮೊದಲ ಪುಟದಿಂದ) ವಾರ್ಡ್ವಾರ್ ಮೀಸಲಾತಿಯಲ್ಲಿ ಕೆಲವು ಬದಲಾವಣೆಯೊಂದಿಗೆ ಈ ಬಗ್ಗೆ ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗಿತ್ತು. ಇದಕ್ಕೂ ೨೭ ಆಕ್ಷೇಪಣೆಗಳು ಸಲ್ಲಿಕೆಯಾಗಿ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ ಎಂಬAತಹ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಇವೆಲ್ಲವೂ ಸರಿಯಾಗಿದ್ದು, ಎರಡು ವರ್ಷಗಳ ಅಂತರದ ಬಳಿಕ ನಗರಸಭೆಗೆ ಕೊನೆಗೂ ಚುನಾವಣೆ ಘೋಷಣೆಯಾಗುವದರೊಂದಿಗೆ ನಗರ ವ್ಯಾಪ್ತಿಯಲ್ಲಿ ಸಂಚಲನವುAಟಾಗಿದೆ.
ಚುನಾವಣಾ ಕಾವು
ಈ ತನಕ ಅಧಿಕೃತವಾಗಿ ಚುನಾವಣೆ ಘೋಷಣೆಯಾಗಿರಲಿಲ್ಲವಾದರೂ ಹೊಸಮೀಸಲಾತಿಯ ಪ್ರಕಾರ ಈಗಾಗಲೇ ನಗರದಲ್ಲಿ ಚುನಾವಣಾ ಕಾವು ಆರಂಭಗೊAಡಿತ್ತು. ರಾಜಕೀಯ ಪಕ್ಷಗಳಲ್ಲಿ - ಆಸಕ್ತ ಅಭ್ಯರ್ಥಿಗಳಲ್ಲಿ ಇದಕ್ಕಾಗಿ ಕಸರತ್ತುಗಳು ಪ್ರಾರಂಭವಾಗಿದ್ದವು. ಇದರ ಬೆನ್ನಲ್ಲೇ ಇದೀಗ ಚುನಾವಣೆಗೆ ಮುಹೂರ್ತ ‘ಫಿಕ್ಸ್’ ಆಗಿದೆ.
೨೩ ವಾರ್ಡ್ಗಳು... ೨೬೬೩೩ ಮತದಾರರು
ನಗರದ ಒಟ್ಟು ೨೩ ವಾರ್ಡ್ಗಳಿಗೆ ಚುನಾವಣೆ ನಡೆಯಬೇಕಾಗಿದೆ. ನಗರ ವ್ಯಾಪ್ತಿಯಲ್ಲಿ ಅಂದಾಜು ೩೬ ಸಾವಿರದಷ್ಟು ಜನಸಂಖ್ಯೆಯಿದ್ದು, ಇವರಲ್ಲಿ ಒಟ್ಟು ೨೬,೬೩೩ ಮಂದಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಈಗಾಗಲೇ ಮತದಾರರ ಪಟ್ಟಿ ಸಿದ್ಧಗೊಂಡಿದ್ದು, ಇದು ಏ. ೭ಕ್ಕೆ ಅಂತಿಮವಾಗಲಿದೆ. ಈ ಪಟ್ಟಿಯಲ್ಲಿ ಶೇ. ೦.೫ ರಷ್ಟು ಮಾತ್ರ ಬದಲಾವಣೆಯಾಗುವ ಸಾಧ್ಯತೆಗಳಿವೆ.
ಈಗಿನ ಪಟ್ಟಿಯಂತೆ ೧೩,೬೧೪ ಮಹಿಳೆಯರು, ೧೩೦೧೯ ಪುರುಷರು ಹಾಗೂ ಇತರೆ ೨ ಸೇರಿ ಒಟ್ಟು ೨೬೬೩೩ ಮತದಾರರಿದ್ದಾರೆ. ಇವರ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಿರುವದು ವಿಶೇಷವಾಗಿದೆ. ಏಪ್ರಿಲ್ ೨೭ ರಂದು ಚುನಾವಣೆಗೆ ದಿನ ನಿಗದಿಯಾಗಿದ್ದು, ಸುಸೂತ್ರ ಚುನಾವಣೆಗಾಗಿ ಜಿಲ್ಲಾಡಳಿತ ಅಗತ್ಯ ತಯಾರಿ ನಡೆಸುತ್ತಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೧೫ ಕೊನೆಯ ದಿನಾಂಕವಾಗಿದ್ದು, ಆಸಕ್ತರು ಈ ನಿಟ್ಟಿನಲ್ಲಿ ತಯಾರಿಯಲ್ಲಿದ್ದಾರೆ.
ಪಕ್ಷಗಳಲ್ಲಿ ಬಿರುಸು
ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್ಡಿಪಿಐ ಪಕ್ಷಗಳು ಸೇರಿದಂತೆ ಸ್ವತಂತ್ರ ಅಭ್ಯರ್ಥಿಗಳಾಗಿಯೂ ಕಣಕ್ಕಿಳಿಯಲು ಹಲವರು ಸಿದ್ಧತೆಯಲ್ಲಿದ್ದಾರೆ. ಪ್ರತಿ ವಾರ್ಡ್ಗಳಿಗೆ ರಾಜಕೀಯ ಪಕ್ಷಗಳಲ್ಲಿ ಎರಡು - ಮೂರು ಪ್ರಬಲ ಆಕಾಂಕ್ಷಿಗಳಿರುವದರಿAದ ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ರಾಜಕೀಯ ಪಕ್ಷಗಳು ಸವಾಲು ಎದುರಿಸುವಂತಾಗಿದೆ. ಇದರಿಂದಾಗಿ ಒಂದೆರಡು ಕಡೆಗಳಲ್ಲಿ ಬಂಡಾಯ ಸ್ಪರ್ಧೆಯೂ ಎದುರಾಗುವ ಸಾಧ್ಯತೆಯಿದೆ. ಪ್ರಸ್ತುತ ಬಿಸಿಲಿನ ಪರಿತಾಪದ ನಡುವೆ ಚುನಾವಣೆಯ ಕಾವು ಆರಂಭಗೊAಡಿದ್ದು, ಮುಂದಿನ ಒಂದು ತಿಂಗಳ ಕಾಲ ಮಡಿಕೇರಿ ನಗರ ಬಿರುಸಿನ ಚಟುವಟಿಕೆಗಳ ಕೇಂದ್ರವಾಗಲಿದೆ.
- ಶಶಿ ಸೋಮಯ್ಯ