ಸುಂಟಿಕೊಪ್ಪ, ಮಾ. ೨೯: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ರೂ. ೧೫ ಲಕ್ಷ ವೆಚ್ಚದ ಕುಡಿಯುವ ನೀರು ಯೋಜನೆಗೆ ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಚಾಲನೆ ನೀಡಿದರು.

ಸುಂಟಿಕೊಪ್ಪ ಕಂದಾಯ ಇಲಾಖೆಯ ಕಚೇರಿ ಸಮೀಪ ನೂತನವಾಗಿ ಜಿ.ಪಂ.ನ ರೂ. ೧೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ೫೦ ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು ವೇಗದಲ್ಲಿ ಬೆಳೆಯುತ್ತಿರುವ ಸುಂಟಿಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಅಗತ್ಯವಾಗಿದ್ದು ಜಿ.ಪಂ. ಅನುದಾನದಲ್ಲಿ ಬೋರ್‌ವೇಲ್ ಪೈಪ್‌ಲೈನ್ ಟ್ಯಾಂಕ್ ಅನ್ನು ನಿರ್ಮಿಸ ಲಾಗಿದೆ. ಜನರು ನೀರನ್ನು ಪೋಲು ಮಾಡದೆ ಅಗತ್ಯಕ್ಕೆ ತಕ್ಕಂತೆ ಬಳಸುವಂತೆ ಕರೆ ನೀಡಿದರು.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ೬ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಹರದೂರು ಹೊಳೆಯಿಂದ ಸುಂಟಿಕೊಪ್ಪಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ರೂ.೧೦ ಕೋಟಿ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಇದರ ಘಟಕವನ್ನು ಹಾನ್‌ಬೈಲ್ ಗ್ರಾಮದಲ್ಲಿ ಸ್ಥಾಪಿಸಲಾಗು ವುದು. ಶ್ರೀ ರಾಮ ಬಡಾವಣೆ ಹಾಗೂ ನಾರ್ಗಾಣೆ ಗ್ರಾಮದಲ್ಲಿ ರೂ.೧೩ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಬೋರ್‌ವೇಲ್ ಅಳವಡಿಸಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಶಬಿರ್, ಜಿನಾಸುದ್ದೀನ್, ಮಂಜುನಾಥ್, ಆಲಿಕುಟ್ಟಿ, ರಫೀಕ್‌ಖಾನ್, ಸೋಮನಾಥ್, ನಾಗರತ್ನ, ರೇಷ್ಮ, ಹಸೀನಾ, ವನಿತಾ, ಮಾಜಿ ಅಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್, ಕೆ. ಇ. ಕರೀಂ ಅಭಿಯಂತರರು ಮತ್ತಿತರರು ಇದ್ದರು.