ನಾಪೋಕ್ಲು, ಮಾ. ೨೯: ನಾಪೋಕ್ಲು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಳಿ ಸುಮಾರು ೨೫.೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಬೇಡ್ಕರ್ ವಸತಿ ಶಾಲಾ ಕಟ್ಟಡಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.

ನಂತರ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು ವಸತಿ ಶಾಲೆಗೆ ಸೂಕ್ತ ಸ್ಥಳ ದೊರೆಯದ ಹಿನ್ನಲೆಯಲ್ಲಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ೭.೫ ಏಕರೆ ಜಾಗವನ್ನು ಬಳಸಿಕೊಂಡು ಅತ್ಯುನ್ನತ ವಸತಿ ಶಾಲೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದರು.

೨೦೧೨ರಲ್ಲಿ ಕೇಂದ್ರ ಸರಕಾರದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಆರಂಭಿಸಲಾಯಿತು. ಇದರ ಪೈಕಿ ಕರ್ನಾಟಕ ರಾಜ್ಯಕ್ಕೆ ೨ ಶಾಲೆಗಳು ಮಂಜೂರಾಗಿದ್ದು, ಒಂದು ಶಾಲೆಯನ್ನು ಭಾಗಮಂಡಲ ಸಮೀಪದ ಸಣ್ಣಪುಲಿಕೋಟುವಿನಲ್ಲಿ ೧೯.೫ ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅದರ ಉದ್ಘಾಟನೆ ನಡೆಯಲಿದೆ ಎಂದರು.

ಈ ಶಾಲೆಯಲ್ಲಿ ೧೨೫ ಬಾಲಕರು ಮತ್ತು ೧೨೫ ಬಾಲಕಿಯರಿಗೆ ವಿದ್ಯಾಭ್ಯಾಸ ಮಾಡಲು ಅವಕಾಶವಿದೆ. ಮೊದಲಿಗೆ ಪರಿಶಿಷ್ಟ ಜಾತಿಯವರಿಗೆ ಆದ್ಯತೆಯಿದ್ದು, ವಿದ್ಯಾರ್ಥಿಗಳ ಕೊರೆತೆ ಯಿದ್ದಲ್ಲಿ ಇತರ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಪ್ರಭಾಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಕೋಡಿಯಂಡ ಇಂದಿರಾ ಹರೀಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಇಂಜಿನಿಯರ್ ನಾಗರಾಜ್ ಇದ್ದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲೆ ನೀತಾ ಸ್ವಾಗತಿಸಿ, ಶಿಕ್ಷಕಿ ಶಾಲಿನಿ ವಂದಿಸಿದರು.