ಸೋಮವಾರಪೇಟೆ, ಮಾ. ೨೯: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮಸ್ಥರು ಸತತ ೨ನೇ ಬಾರಿಯೂ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.ಈ ಹಿಂದೆ ಗ್ರಾ.ಪಂ. ಚುನಾವಣೆ ಎದುರಾಗಿದ್ದ ಸಂದರ್ಭ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆ ಚುನಾವಣೆಯನ್ನು ಬಹಿಷ್ಕರಿಸಿದ್ದರು. ತಾಲೂಕು ತಹಶೀಲ್ದಾರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಖುದ್ದು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಆಲಿಸಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದರೊಂದಿಗೆ ಚುನಾವಣೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು. ನಂತರದ ದಿನಗಳಲ್ಲಿ ಅಧಿಕಾರಿಗಳು ಗ್ರಾ.ಪಂ. ಚುನಾವಣೆಯಲ್ಲಿ ‘ಬ್ಯುಸಿ’ಯಾದ ಹಿನ್ನೆಲೆ ಕೂತಿ ಗ್ರಾಮಸ್ಥರನ್ನು ಮರೆತಿದ್ದರು.ಇದೀಗ ಮರು ಚುನಾವಣೆಗೆ ದಿನಾಂಕ ನಿಗದಿಯಾದರೂ ಈ ಹಿಂದೆ ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಾರದ ಹಿನ್ನೆಲೆ ಗ್ರಾಮಸ್ಥರು ಒಮ್ಮತದ ಅಭಿಪ್ರಾಯದೊಂದಿಗೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾದರು. ಪರಿಣಾಮ ಈ ವಾರ್ಡ್ನಿಂದ ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಇಂದು ನಡೆಯಬೇಕಿದ್ದ ಚುನಾವಣೆ ರದ್ದಾಯಿತು.
ಗ್ರಾಮಕ್ಕೆ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲ. ವಿದ್ಯುತ್ ಮಾರ್ಗ ಬದಲಾಯಿಸುವಂತೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಮೊಬೈಲ್ ಟವರ್ ನಿರ್ಮಿಸುವಂತೆ ಕೋರಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದರೊಂದಿಗೆ ಗ್ರಾ.ಪಂ. ಚುನಾವಣೆಗೆ ಅವೈಜ್ಞಾನಿಕ ಮೀಸಲಾತಿ ನಿಗದಿ ಪಡಿಸಲಾಗುತ್ತಿದೆ. ವಾರ್ಡ್ನಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಇಲ್ಲದಿದ್ದರೂ ಅದೇ ಮೀಸಲಾತಿ ನಿಗದಿಪಡಿಸಲಾಗುತ್ತಿದೆ. ಇದನ್ನು ಬದಲಾಯಿಸುವಂತೆ ಕೇಳಿದರೂ ಸ್ಪಂದನ ಇಲ್ಲ. ಈ ಹಿನ್ನೆಲೆ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಿದ್ದು, ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.