ಭಾಗಮಂಡಲ, ಮಾ. ೨೯: ರಾಜ್ಯದ ಪ್ರಮುಖ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆಯ ಭಾಗಮಂಡಲ-ತಲಕಾವೇರಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ಭಾಗಮಂಡಲಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನಗಳಾಗಬೇಕಿದೆ. ಇತ್ತೀಚೆಗೆ ಗ್ರಾಮ ಪಂಚಾಯಿತಿ ಚುನಾವಣೆಗಳು ಕಳೆದು ಅಧ್ಯಕ್ಷರು ಆಯ್ಕೆಗೊಂಡಿದ್ದು, ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಭಾಗಮಂಡಲ ಪಟ್ಟಣದಲ್ಲಿ ಶೌಚಾಲಯ ಹಾಗೂ ಬಸ್ಸು ನಿಲ್ದಾಣ ಇಲ್ಲದೇ ಇದರ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆದುಕಾರು ಪಮಿತ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಪ್ರವಾಸೋದ್ಯಮ ಇಲಾಖೆ ಯಿಂದ ೫ ಲಕ್ಷ ರೂ.ಬಿಡುಗಡೆ ಯಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸದ್ಯದಲ್ಲಿಯೇ ನೂತನ ಶೌಚಾಲಯ ನಿರ್ಮಾಣ ಆಗಲಿದ್ದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ. ಬಸ್ಸು ನಿಲ್ದಾಣಕ್ಕೆ ಜಾಗದ ಕೊರತೆ ಇದ್ದು ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದು ಒಂದಷ್ಟು ಜಾಗ ಕಂದಾಯ ಇಲಾಖೆಗೆ ಸೇರಿದ್ದು, ಭಾಗಮಂಡಲ ಪಟ್ಟಣದಲ್ಲಿ ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಜಾಗ ಗುರುತಿಸಿ ಉತ್ತಮ ಬಸ್ ನಿಲ್ದಾಣ ಮಾಡುವ ಚಿಂತನೆ ಇದೆ ಎಂದರು. ಕಳೆದ ಹಲವು ವರ್ಷಗಳಿಂದ ಭಾಗಮಂಡಲದಲ್ಲಿ ಅಶುಚಿತ್ವದ ಬಗ್ಗೆ ವ್ಯಾಪಕವಾಗಿ ಟೀಕೆಗಳು ಕೇಳಿಬರುತ್ತಿದ್ದು ಈ ಬಗ್ಗೆ ತಮ್ಮ ಅವಧಿಯಲ್ಲಿ ಕಸ ವಿಲೇವಾರಿಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತೀರಿ ಎಂದು ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ಈಗ ತಣ್ಣಿಮಾನಿ ಗ್ರಾಮದಲ್ಲಿ ಕಸವಿಲೆವಾರಿ ಘಟಕಕ್ಕೆ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ಮುಗಿದಿದೆ. ಘಟಕ ನಿರ್ಮಾಣಕ್ಕೆ ಭೂಮಿಪೂಜೆ ಆಗಿದ್ದು, ಕೆಲಸ ಆರಂಭಿಸಲು ಮುಂದಾದಾಗ ಅರಣ್ಯ ಇಲಾಖೆಯವರು ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಘಟಕ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದು ತಡೆ ಒಡ್ಡಿದ್ದರು. ನಂತರ ಕೋರಂಗಾಲ ಗ್ರಾಮದ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಸರಹದ್ದಿನಲ್ಲಿ ಒಂದು ಏಕರೆ ಸ್ಥಳ ಗುರುತಿಸಿ ತಂತಿಬೇಲಿ ಅಳವಡಿಸಿ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಈಗಾಗಲೆ ೧೩ಲಕ್ಷ ಅನುದಾನ ಬಂದಿದೆ. ಅದರಲ್ಲಿ ಐದು ಲಕ್ಷ ಟ್ರಾö್ಯಕ್ಟರ್ ಖರೀದಿಗೆ ಕ್ರಮ ವಹಿಸಿದ್ದು ೮ ಲಕ್ಷ ಉಳಿಕೆಯಾಗಿದ್ದು ಈಗಿನ ಅಂದಾಜು ಪಟ್ಟಿಯಂತೆ ೧೨ ಲಕ್ಷ ರೂ. ಅನುದಾನ ನೂತನ ಕಾಮಗಾರಿ ಘಟಕಕ್ಕೆ ಬೇಕಾಗಿದೆ. ಈ ಹಿಂದೆ ೨೦೧೬ -೧೭ರ ಸಾಲಿನಲ್ಲಿ ತಯಾರಿಸಿದ ಅಂದಾಜುಪಟ್ಟಿಗೂ ಈಗಿನ ಅಂದಾಜು ಪಟ್ಟಿಗೂ ೫-೬ ಲಕ್ಷ ರೂ. ವ್ಯತ್ಯಾಸ ಇದ್ದು ಹಣಕಾಸಿನ ಕೊರತೆ ಇದ್ದು ಘಟಕ ಸ್ಥಾಪನೆಗೆ ಮುಂದಾಗಲು ಕಷ್ಟಕರವಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಪಂಚಾಯಿತಿಯ ಸಾಮಾನ್ಯಸಭೆಯ ನಂತರ ಕೂಡಲೇ ಘಟಕಕ್ಕೆ ತಗಲುವ ವೆಚ್ಚವನ್ನು ಮಂಜೂರು ಮಾಡುವಂತೆ ಕೋರಿ ನಂತರ ನೂತನ ಘಟಕ ನಿರ್ಮಾಣ ಆರಂಭಿಸಿ ಕಸ ವಿಲೇವಾರಿ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಭಾಗಮಂಡಲದಲ್ಲಿ ಹೊಟೇಲ್ ಮತ್ತು ಮನೆಗಳ ತ್ಯಾಜ್ಯಗಳು, ನೀರು ಒಳಚರಂಡಿಯನ್ನು ಸೇರುತ್ತಿದ್ದು ಈ ಬಗ್ಗೆ ಏನು ಕ್ರಮ ವಹಿಸುವಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಈಗಾಗಲೇ ೨.೪೧ಕೋಟಿ ರೂ. ತ್ಯಾಜ್ಯ ನೀರು ಸಂಗ್ರಹ ಘಟಕಕ್ಕೆ ಮಂಜೂರಾಗಿದ್ದು ದೇವಾಲಯದ ಹೆಸರಿನಲ್ಲಿ ಜಾಗ ಇದೆ. ೦.೨೭ ಸೆಂಟ್ ಜಾಗವನ್ನು ಗುರುತಿಸಿ ತ್ಯಾಜ್ಯ ನೀರು ಘಟಕ ಕೆಲಸ ಆರಂಭವಾಗಿದ್ದು ತ್ಯಾಜ್ಯ ನೀರು ಸಮಸ್ಯೆ ಬಗೆ ಹರಿಯಲಿದೆ. ಆದರೆ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಆಗಿರುವುದರಿಂದ ಘಟಕದ ಸಾಧಕ ಬಾಧಕ ಅಧ್ಯಯನ ಮಾಡಬೇಕಿದೆ. ಇದೇ ರೀತಿಯ ಘಟಕವನ್ನು ಬೆಂಗಳೂರಿನ ದೇವನಹಳ್ಳಿಯಲ್ಲಿ ಆರಂಭಿಸಿ ಯಶಸ್ವಿಯಾಗಿದ್ದು ಕಾರ್ಯನಿರ್ವ ಹಿಸುತ್ತಿದೆ. ರಾಜ್ಯದಲ್ಲಿ ಎರಡನೇ ತ್ಯಾಜ್ಯ ನಿರ್ವಹಣಾ ಘಟಕ ಭಾಗಮಂಡಲದಲ್ಲಿ ಆಗುತ್ತಿದ್ದು ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಿದೆ ಎನ್ನುವುದನ್ನು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಗ್ರಾಮಪಂಚಾಯಿತಿ ಮತ್ತು ದೇವಾಲಯ ಜಂಟಿಯಾಗಿ ಇದರ ನಿರ್ವಹಣೆ ಮಾಡಬೇಕಿದೆ. ವಾಹನ ಸಿಬ್ಬಂದಿಗಳ ನಿಯೋಜನೆ ಆಗಬೇಕಿದೆ. ಒಟ್ಟಾರೆ ಯಶಸ್ವಿ ನಿರ್ವಹಣೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಜಾಗದ ವಿಷಯದಲ್ಲಿ ಗೊಂದಲಗಳಿದ್ದು, ೦.೨೭ ಏಕರೆ ಜಾಗವನ್ನು ಗ್ರಾಮ ಪಂಚಾಯಿತಿಗೆ ನೀಡಲು ಜಿಲ್ಲಾಧಿಕಾರಿ ಆದೇಶಿಸಿದ್ದು ಇನ್ನೂ ಕೂಡ ಪಂಚಾಯಿತಿ ಖಾತೆಗೆ ವರ್ಗಾವಣೆ ಆಗಿಲ್ಲ. ಈ ಕೆಲಸ ತ್ವರಿತವಾಗಿ ಆಗಬೇಕಿದೆ. ಗ್ರಾಮಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಕೊಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಪಾರ್ಕಿಂಗ್ ಶುಲ್ಕ ನಿಲ್ಲಿಸುವುದಿಲ್ಲ
ಭಾಗಮಂಡಲ ತಲಕಾವೇರಿಯಲ್ಲಿ ಯಾತ್ರಾರ್ಥಿ ಗಳಿಂದ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಬಗ್ಗೆ ವ್ಯಾಪಕ ವಿರೋಧ ಇದೆ. ಪಂಚಾಯಿತಿಗೆ ಹೆಚ್ಚಿನ ಆದಾಯ ಇರುವುದು ವಾಹನ ಶುಲ್ಕ ಹಾಗೂ ಜಾತ್ರೆ ಸಂಬAಧ ಅಂಗಡಿ ಮಳಿಗೆಗಳಿಂದ. ಆದರೆ ಜಾತ್ರೆ ಖರ್ಚಿಗೆ ವಿಶೇಷ ಅನುದಾನಗಳು ಯಾವುದೇ ಗ್ರಾಮ ಪಂಚಾಯಿತಿಗೆ ಬಾರದೇ ಇರುವುದು ಜಾತ್ರೆ ಸಂಬAಧ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮಪಂಚಾಯಿತಿಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಅಲ್ಲದೆ ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ವಸೂಲಾತಿ ಶುಲ್ಕವನ್ನು ನಿಲ್ಲಿಸುವ ಚಿಂತನೆಯನ್ನು ಮಾಡಿಲ್ಲ. ಗ್ರಾಮದ ಅಭಿವೃದ್ಧಿಯಾಗಬೇಕಾದರೆ ಅನುದಾನ ಅಗತ್ಯ. ಗ್ರಾಮ ಪಂಚಾಯಿತಿಗೆ ಹೆಚ್ಚಿನ ಆದಾಯ ಯಾವುದೇ ಮೂಲಗಳಿಂದ ಇಲ್ಲದೇ ಇರುವುದರಿಂದ ಈ ಬಗ್ಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸೇರಿದಂತೆ ಸ್ಥಳೀಯ ನಿಯೋಗ ಸರ್ಕಾರದ ಗಮನ ಸೆಳೆಯುವುದಾಗಿ ಪಮಿತ ಹೇಳಿದರು.
ಕುಡಿಯುವ ನೀರಿನ ಸಮಸ್ಯೆ: ಕಾವೇರಿ ನದಿ ಉಗಮಿಸುವ ಕ್ಷೇತ್ರದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಅಂಚಿನಲ್ಲಿ ಕುಡಿಯುವ ನೀರಿನ ಪೈಪ್ಗಳು ಹಾಳಾಗಿದ್ದು ಈ ಬಗ್ಗೆ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದು ರಸ್ತೆಯ ಅಂಚನ್ನು ಗುರುತಿಸುವ ಕೆಲಸವಾಗಬೇಕೆಂದು ಕೋರಲಾಗಿದೆ. ಇದಕ್ಕೆ ಕಾವೇರಿ ನೀರಾವರಿ ನಿಗಮದಿಂದ ಕೆಲಸ ಕಾರ್ಯಗಳು ಪ್ರಗತಿಯಲ್ಲಿರು ವುದರಿಂದ ರಸ್ತೆಯ ಅಂಚನ್ನು ಗುರುತಿಸುವ ಕಾರ್ಯ ಅಸಾಧ್ಯ ಎಂಬ ಉತ್ತರ ಗ್ರಾಮಪಂಚಾಯಿತಿಗೆ ಬಂದಿದೆ ಎಂದರು. ಒಟ್ಟಾರೆ ಕುಡಿಯುವ ನೀರು ಸಮಸ್ಯೆ ಬಗೆ ಹರಿಸುವಲ್ಲಿ ಮೇಲ್ಸೇತುವೆ ಕಾಮಗಾರಿ ಶೇ. ೭೦ರಷ್ಟು ಪೂರ್ಣಗೊಂಡ ಬಳಿಕವಷ್ಟೇ ಸಾಧ್ಯ.
ಒಟ್ಟಿನಲ್ಲಿ ಭಾಗಮಂಡಲಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನಗಳಾಗಬೇಕಿದೆ. ಈ ಕೆಲಸವನ್ನು ಗ್ರಾಮ ಪಂಚಾಯಿತಿ ನಿರ್ವಹಿಸುವುದೇ ಎಂದು ಕಾದು ನೋಡಬೇಕಿದೆ.
-ಸುನಿಲ್ ಕುಯ್ಯಮುಡಿ, ಸುಧೀರ್ ಹೊದ್ದೇಟಿ