ಲಾಕ್‌ಡೌನ್ ಇಲ್ಲ - ಆದರೆ ೧೫ ದಿನ ಜಾತ್ರೆ, ಪ್ರತಿಭಟನೆಗೆ ಬ್ರೇಕ್: ಸಿಎಂ ಯಡಿಯೂರಪ್ಪ

ಬೆಂಗಳೂರು, ಮಾ. ೨೯: ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಕೊರೊನಾ ರೂಪಾಂತರಿ ಹೆಚ್ಚಳ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಇಂದು ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹ, ಆರೋಗ್ಯ, ಶಿಕ್ಷಣ ಸಚಿವರು ಹಾಗೂ ಇಲಾಖಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಯಾವುದೇ ಲಾಕ್‌ಡೌನ್ ಇಲ್ಲ. ನೈಟ್ ಕರ್ಪ್ಯೂ ಸಹ ಜಾರಿಗೊಳಿಸುವುದಿಲ್ಲ. ಆದರೆ ನಾಳೆಯಿಂದ ೧೫ ದಿನ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಪ್ರತಿಭಟನೆ, ಸತ್ಯಾಗ್ರಹಗಳಿಗೆ ಅವಕಾಶ ಇಲ್ಲ ಎಂದರು. ಲಾಕ್‌ಡೌನ್ ಬದಲಿಗೆ ರಾಜ್ಯದಲ್ಲಿ ಕೋವಿಡ್ ನಿರ್ಬಂಧಿಸಲು ಒಂದಷ್ಟು ಕಠಿಣ ನಿಯಮಗಳು ಜಾರಿಗೆ ತರಲಾಗುತ್ತಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು. ಅಪಾರ್ಟ್ಮೆಂಟ್‌ಗಳಲ್ಲಿ ಪಾರ್ಟಿ, ಜಿಮ್ ಮತ್ತು ಈಜುಕೋಳಗಳನ್ನು ನಿಷೇಧಿಸಲಾಗಿದೆ ಎಂದು ಸಿಎಂ ಹೇಳಿದರು. ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಎಂದಿದ್ದಾರೆ. ಇನ್ನು ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಹಿತದೃಷ್ಟಿಯಿಂದ ಬರೆದಿದ್ದ ಪತ್ರವನ್ನು ಓದಿದ ಸಿಎಂ ಯಡಿಯೂರಪ್ಪ, ಜನರನ್ನು ಭಯ ಪಡಿಸದೇ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮಾಸ್ಕ್, ಸಾನಿಟೈಸರ್ ಮತ್ತು ಲಸಿಕೆ ಹೆಚ್ಚಳ ಮಾಡುವ ಬಗ್ಗೆ ಸಲಹೆ ನೀಡಿದ್ದು, ಅದನ್ನು ಸಹ ನಿಮ್ಮ ಗಮನಕ್ಕೆ ತಂದಿದ್ದೇನೆ ಎಂದರು.

ಒತ್ತಾಯ ಪೂರ್ವಕ ಹೇಳಿಕೆ ಕೊಡಿಸುತ್ತಿದ್ದಾರೆ : ಯುವತಿಯ ಪೋಷಕರ ಆರೋಪ

ಬೆಳಗಾವಿ, ಮಾ. ೨೯: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಡಿ ಗ್ಯಾಂಗ್ ನಮ್ಮ ಮಗಳಿಂದ ಒತ್ತಾಯ ಪೂರ್ವಕವಾಗಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಸಿಡಿ ಯುವತಿಯ ಪೋಷಕರು ಆರೋಪಿಸಿದ್ದಾರೆ. ಇಂದು ಸಿಡಿ ಯುವತಿ ಪ್ರತ್ಯಕ್ಷ ಆಗುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಡಿ ಯುವತಿ ಪೋಷಕರು, ನಮ್ಮ ಮಗಳು ಒತ್ತಡಲ್ಲಿದ್ದು, ಈ ಸಂದರ್ಭದಲ್ಲಿ ಆಕೆಯ ಹೇಳಿಕೆಗಳನ್ನು ಪರಿಗಣಿಸಬಾರದು. ಮಗಳಿಗೆ ಕೌನ್ಸಲಿಂಗ್ ಅಗತ್ಯವಿದೆ. ಕೌನ್ಸಲಿಂಗ್ ನಂತರವೇ ಆಕೆಯ ಹೇಳಿಕೆಯನ್ನು ಪೊಲೀಸರು ಮತ್ತು ನ್ಯಾಯಧೀಶರು ದಾಖಲಿಸಿಕೊಳ್ಳಬೇಕು ಎಂದು ಯುವತಿ ತಂದೆ ಮನವಿ ಮಾಡಿದ್ದಾರೆ.

ರಾಸಲೀಲೆ ಪ್ರಕರಣ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ಯುವತಿ

ಬೆಂಗಳೂರು, ಮಾ. ೨೯: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದ ಸಂತ್ರಸ್ತ ಯುವತಿ ಸೋಮವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ಮಾಜಿ ಸಚಿವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತಾವು ವೈಯಕ್ತಿಕವಾಗಿ ಪ್ರಕರಣದ ತನಿಖೆಯ ಮೇಲ್ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಮಾರ್ಚ್ ೨೮ರ ದಿನಾಂಕವಿರುವ ಮೂರು ಪುಟಗಳ ಪತ್ರದಲ್ಲಿ, ತಾನು ಎದುರಿಸುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂದಿರುವ ಯುವತಿ, ತನಗೆ ಸೂಕ್ತ ರಕ್ಷಣೆ ಒದಗಿಸಲು ಮತ್ತು ನ್ಯಾಯ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ನನ್ನ ತಂದೆ ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕೇಸ್ ನಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು ಎಂದು ಯುವತಿ ಇಮೇಲ್ ಮೂಲಕ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

೬೦ ವರ್ಷದ ಮಹಿಳೆಯನ್ನು ಹೊಡೆದು ಕೊಂದರು

ಇಟವಾ, ಮಾ. ೨೯: ತಮ್ಮ ಮನೆಯ ಮುಂದೆ ಕುಡಿದು ಹೋಳಿ ಆಚರಿಸುತ್ತಿದ್ದುದನ್ನು ಪ್ರಶ್ನಿಸಿದ ೬೦ ವರ್ಷದ ಮಹಿಳೆಯನ್ನು ಹೊಡೆದ ಕೊಂದ ಧಾರುಣ ಘಟನೆ ಉತ್ತರ ಪ್ರದೇಶದ ಮೇವಾತಿ ಟೋಲಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೋಳಿ ಆಚರಿಸುತ್ತಿದ್ದ ಕೆಲವರು ಇಂದು ಬೆಳಗ್ಗೆ ೧೦ರ ಸುಮಾರಿಗೆ ಮಹಿಳೆಯ ಮನೆಗೆ ನುಗ್ಗಿ ಕೋಲು ಮತ್ತು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ನಗರ) ಪ್ರಶಾಂತ್ ಕುಮಾರ್ ಪ್ರಸಾದ್ ಹೇಳಿದ್ದಾರೆ. ಮಹಿಳೆಯ ರಕ್ಷಣೆಗೆ ಧಾವಿಸಿದ ಇತರ ಕುಟುಂಬದ ಸದಸ್ಯರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.