ಮಡಿಕೇರಿ, ಮಾ. ೨೭: ವನ್ಯ ಜೀವಿಗಳಿಂದ ಕೊಡಗಿನ ರೈತರನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಘಟಕ ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಈ.ರಾ ದುರ್ಗಾಪ್ರಸಾದ್, ಪೊನ್ನಂಪೇಟೆ ತಾಲೂಕಿನಲ್ಲಿ ಹುಲಿ ದಾಳಿಗೆ ಮನುಷ್ಯರು, ಜಾನುವಾರುಗಳು ಬಲಿಯಾಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ಕಾಡಾನೆಗಳ ಉಪಟಳದಿಂದ ಜೀವ ಹಾನಿಯೊಂದಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಜಿಲ್ಲೆಯ ಜನತೆ ಅನುಭವಿಸುತ್ತಿರುವ ಸಂಕಷ್ಟಗಳಿಗೆ ರಾಜ್ಯ ಸರ್ಕಾರ ಹಾಗೂ ಇಲ್ಲಿನ ಜನಪ್ರತಿನಿಧಿಗಳೇ ನೇರ ಕಾರಣ ಎಂದು ಆರೋಪಿಸಿದರು. ಕಾಡಾನೆ ದಾಳಿಯಿಂದ ಮರಣ ಹೊಂದಿದವರ ಕುಟುಂಬಕ್ಕೆ ಸರ್ಕಾರ ರೂ. ೨೦ ಲಕ್ಷ ಪರಿಹಾರ ನೀಡಬೇಕು ಹಾಗೂ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು. ಆನೆ ದಾಳಿಯಿಂದ ಅಂಗವಿಕಲರಾದವರಿಗೆ ರೂ. ೧೦ ಲಕ್ಷ ಪರಿಹಾರ ಕೊಡಬೇಕು. ತೋಟಗಳಲ್ಲಿ ಕಾರ್ಮಿಕರು ಕೆಲಸ ಮಾಡುವ ಸಂದರ್ಭ ಅವರ ರಕ್ಷಣೆಗೆ ಅರಣ್ಯ ಇಲಾಖೆಯ ಗನ್‌ಮ್ಯಾನ್‌ಗಳನ್ನು ನೇಮಿಸಬೇಕು. ಆನೆ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಮತ್ತು ಮರಳಿ ಕರೆತರಲು ಅರಣ್ಯ ಇಲಾಖೆ ವಾಹನ ವ್ಯವಸ್ಥೆ ಮಾಡಬೇಕು. ಆನೆ ದಾಳಿಯಿಂದ ತೋಟಗಳಲ್ಲಿ ಕಾಫಿ ಗಿಡ ಹಾಳಾದರೆ ಸರ್ಕಾರ ಒಂದು ಗಿಡಕ್ಕೆ ರೂ. ೨೫ ಸಾವಿರ ಪರಿಹಾರ ನೀಡಬೇಕು. ಭತ್ತ ಬೆಳೆ ಹಾಳಾದರೆ ಎಕರೆಯೊಂದಕ್ಕೆ ರೂ. ೬೦ ಸಾವಿರ, ಬಾಳೆ ನಾಶ ಮಾಡಿದರೆ ಒಂದು ಎಕರೆಗೆ ರೂ. ೫೦ ಸಾವಿರ, ಸಿಲ್ವರ್ ಮರಕ್ಕೆ ರೂ. ೧೫ ಸಾವಿರ, ತೆಂಗಿಗೆ ರೂ. ೨೫ ಸಾವಿರ, ಅಡಿಕೆಗೆ ರೂ. ೧೫ ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಹನೀಫ್, ಕೆ.ಎ. ಹಂಸ, ಎಂ.ಎ. ಬಾಬುಟಿ ಹಾಜರಿದ್ದರು.