ಕೊಡ್ಲಿಪೇಟೆ, ಮಾ. ೨೭: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಕಚೇರಿ, ತಾ.ಪಂ., ಆರೋಗ್ಯ, ಆರಕ್ಷಕ, ಸಮಾಜ ಕಲ್ಯಾಣ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಕೊಡ್ಲಿಪೇಟೆಯ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸೋಮವಾರಪೇಟೆಯ ವಕೀಲರಾದ ಹೆಚ್. ಆರ್. ಪವಿತ್ರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಕಾನೂನುಗಳ ಬಗ್ಗೆ ಅರಿವು ಹೊಂದಿರಬೇಕು. ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದರು.

೨೦೧೨ರಲ್ಲಿ ಜಾರಿಗೆ ಬಂದ ಪೋಕ್ಸೋ ಕಾಯಿದೆಯು ೧೮ ವರ್ಷ ಒಳಪಟ್ಟ ಮಕ್ಕಳ ಹಕ್ಕುಗಳ ರಕ್ಷಣೆಯೊಂದಿಗೆ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಸಹಕಾರಿಯಾಗಿದೆ. ೧೮ ವರ್ಷ ಒಳಪಟ್ಟ ಹೆಣ್ಣು ಹಾಗೂ ಗಂಡು ಮಕ್ಕಳು ಈ ಕಾಯ್ದೆಗೆ ಒಳಪಡುತ್ತಾರೆ. ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಲೈಂಗಿಕ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿದ್ದು, ಇಂತಹ ಪ್ರಕರಣಗಳು ನಡೆಯುತ್ತಿದ್ದರೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಶೋಷಣೆಗೆ ಒಳಗಾದವರ ಮಾಹಿತಿಯನ್ನು ಬಹಿರಂಗಪಡಿಸದೇ, ಆರೋಪಿಗಳಿಗೆ ಶಿಕ್ಷೆ ವಿಧಿಸುವ ಅವಕಾಶ ಕಾನೂನು ಕಲ್ಪಿಸಿದೆ ಎಂದರು. ಉಪನ್ಯಾಸಕರಾಗಿ ಭಾಗವಹಿಸಿದ ವಕೀಲ ವೆಂಕಟೇಶ್ ಅವರು ಮೋಟಾರು ವಾಹನ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿ, ಚಾಲನಾ ಪರವಾನಗಿ, ಹೆಲ್ಮೆಟ್ ರಹಿತ ಚಾಲನೆ ಅಪರಾಧವಾಗಿದೆ. ಇದರೊಂದಿಗೆ ತ್ರಿಬಲ್ ರೈಡಿಂಗ್, ಸಿಗ್ನಲ್ ಜಂಪಿAಗ್‌ಗೂ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸುವ ಅವಕಾಶ ಕಾನೂನಿನಲ್ಲಿದೆ. ಚಾಲನಾ ಪರವಾನಗಿ ಇಲ್ಲದ ವಿದ್ಯಾರ್ಥಿಗಳು ವಾಹನಗಳನ್ನು ಚಲಾಯಿಸಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಪರಮೇಶ್ ವಹಿಸಿದ್ದರು. ಅತಿಥಿಗಳಾಗಿ ಪ್ರಾಂಶುಪಾಲ ನಿರಂಜನ್, ಶಿವಪ್ರಸಾದ್ ಉಪಸ್ಥಿತರಿದ್ದರು.