ಸೋಮವಾರಪೇಟೆ, ಮಾ. ೨೭: ಲೋಕೋಪಯೋಗಿ ಇಲಾಖೆಗೆ ಸೇರಿದ ಸೋಮವಾರಪೇಟೆ-ಶಾಂತಳ್ಳಿ-ಸಕಲೇಶಪುರ ರಾಜ್ಯ ಹೆದ್ದಾರಿಯ ಆಲೇಕಟ್ಟೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಸಂಬAಧಿಸಿದ ಇಲಾಖೆ ಗುಂಡಿಮುಚ್ಚಲು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಸ್ತೆಯ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ತಾ. ೨೯ರಂದು ಆಲೇಕಟ್ಟೆಯಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು. ನಂತರ ಇಲಾಖಾ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ವಿವೇಕಾನಂದ ವೃತ್ತದಿಂದ ಖಬರಸ್ತಾನದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಸಂದರ್ಭ ಆಲೇಕಟ್ಟೆ ರಸ್ತೆಯ ಯೋಗೇಂದ್ರ ಅವರ ಮನೆಯ ಮುಂಭಾಗ ಮತ್ತು ಪದ್ಮಕ್ಯಾಂಟೀನ್‌ನ ತಿರುವಿನಲ್ಲಿ ರಸ್ತೆ ಅಗೆದು ಮೋರಿ ಹಾಕಲಾಗಿದೆ. ನಂತರದ ದಿನಗಳಲ್ಲಿ ಗುಂಡಿ ಮುಚ್ಚದೇ ಇರುವುದರಿಂದ ವಾಹನ ಸಂಚಾರ ದುಸ್ತರವಾಗಿದ್ದು, ಅವಘಡಗಳು ಸಂಭವಿಸುತ್ತಿವೆ ಎಂದು ಸ್ಥಳೀಯರಾದ ಜನಾರ್ಧನ್, ಕೃಷ್ಣಮೂರ್ತಿ, ಸುರೇಶ್, ಪ್ರೇಮ್‌ನಾಥ್ ಸೇರಿದಂತೆ ಇತರರು ಆರೋಪಿಸಿದ್ದಾರೆ.

ಇದರೊಂದಿಗೆ ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ವೃದ್ಧರು, ಮಕ್ಕಳು ನಡೆದಾಡುವ ಸಂದರ್ಭ ಹಲವು ಬಾರಿ ಬಿದ್ದು ಗಾಯಗಳಾಗಿವೆ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ವಾಹನ ಅವಘಡಗಳೂ ಸಂಭವಿಸುತ್ತಿವೆ. ತಕ್ಷಣ ರಸ್ತೆಯ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.