ಸೋಮವಾರಪೇಟೆ, ಮಾ. ೨೬: ಬಸ್ಗಳ ಮೂಲಕ ಶಾಲಾ ಕಾಲೇಜಿಗೆ ತೆರಳುವ ಕೆಲ ವಿದ್ಯಾರ್ಥಿಗಳಿಂದಾಗಿ ಸೋಮವಾರಪೇಟೆ ಪಟ್ಟಣದ ಬಸ್ ನಿಲ್ದಾಣ ಕಸದ ಕೊಂಪೆಯಾಗುತ್ತಿದೆ.
ಪ್ರತಿ ದಿನ ಸಂಜೆ ಶಾಲೆ-ಕಾಲೇಜು ಮುಗಿಸಿ ಬಸ್ ನಿಲ್ದಾಣಕ್ಕೆ ಆಗಮಿಸುವ ವಿದ್ಯಾರ್ಥಿಗಳು ಗ್ರಾಮಕ್ಕೆ ತೆರಳಲು ಬಸ್ ಏರಿ ಕುಳಿತುಕೊಳ್ಳುವ ಸಂದರ್ಭ ಅಂಗಡಿಗಳಿAದ ಖರೀದಿಸಿದ ವಿವಿಧ ತಿಂಡಿ, ಮಿಠಾಯಿ, ಐಸ್ಕ್ರೀಂಗಳನ್ನು ತಿಂದು ಅದರ ಪೊಟ್ಟಣ/ಪ್ಲಾಸ್ಟಿಕ್ಗಳನ್ನು ಕಿಟಕಿಯಿಂದ ಹೊರ ಹಾಕುತ್ತಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣ ಸಂಜೆ ವೇಳೆಗೆ ಕಸದ ನಿಲ್ದಾಣವಾಗಿ ಮಾರ್ಪಡುತ್ತಿದೆ.
ಒಂದು ಬಸ್ ಕನಿಷ್ಟ ೨೦ ನಿಮಿಷ ನಿಲ್ದಾಣದಲ್ಲಿ ನಿಂತರೆ ಏನಿಲ್ಲವೆಂದರೂ ೨೦ರಿಂದ ೩೦ ಪೊಟ್ಟಣಗಳು ಬಸ್ನ ಸುತ್ತಮುತ್ತ ಬೀಳುತ್ತಿವೆ. ಸಂಜೆ ೪ ರಿಂದ ೫.೩೦ರ ಅವಧಿಯಲ್ಲಿ ಬಸ್ ನಿಲ್ದಾಣ ಕಸಗಳಿಂದ ತುಂಬಿಕೊಳ್ಳುತ್ತದೆ. ಐಸ್ಕ್ರೀಂಗಳ ಪೊಟ್ಟಣ, ಕುರ್ಕುರೆ, ಜ್ಯೂಸ್ಗಳ ಪ್ಯಾಕೆಟ್, ತಿಂಡಿಗಳ ಕವರ್, ಚಾಕಲೇಟ್ನ ಪ್ಲಾಸ್ಟಿಕ್, ಕಡಲೆಕಾಯಿ ಸಿಪ್ಪೆಗಳು ಬಸ್ ನಿಲ್ದಾಣದಲ್ಲಿ ಶೇಖರಣೆಗೊಳ್ಳುತ್ತಿದ್ದು, ಗಾಳಿ ಬೀಸುವ ಸಮಯದಲ್ಲಿ ಇಡೀ ನಿಲ್ದಾಣಕ್ಕೆ ವ್ಯಾಪ್ತಿಸುತ್ತವೆ.
ಶುಚಿತ್ವದ ಬಗ್ಗೆ ಶಾಲಾ ಕಾಲೇಜಿನಲ್ಲಿ ನೀಡುವ ಉಪನ್ಯಾಸ ಅಲ್ಲಿಗಷ್ಟೇ ಸೀಮಿತ ಎಂಬAತಾಗಿದೆ. ಶಾಲಾ ಕಾಲೇಜು ಆವರಣದ ಹೊರಭಾಗದಲ್ಲೂ ಪರಿಸರದ ಶುಚಿತ್ವ ಕಾಪಾಡಿಕೊಳ್ಳಬೇಕೆಂಬ ಕನಿಷ್ಟ ತಿಳುವಳಿಕೆಯನ್ನು ಇಂತಹ ವಿದ್ಯಾರ್ಥಿಗಳಿಗೆ ನೀಡಬೇಕಿದೆ.
ಇದರೊಂದಿಗೆ ವಿದ್ಯಾರ್ಥಿಗಳು ಅಂಗಡಿಗಳಿಗೆ ತಿಂಡಿ ತಿನಿಸು ಖರೀದಿಸಲು ಆಗಮಿಸುವ ಸಂದರ್ಭ ತ್ಯಾಜ್ಯಗಳನ್ನು ಅಲ್ಲಲ್ಲಿ ಹಾಕಬಾರದು ಎಂದು ಅಂಗಡಿ ಮಾಲೀಕರು ತಿಳಿ ಹೇಳಬೇಕಿದೆ. ಬಸ್ಗಳ ನಿರ್ವಾಹಕರು, ಏಜೆಂಟ್ಗಳೂ ಸಹ ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರೆ ಸೋಮವಾರಪೇಟೆ ಬಸ್ ನಿಲ್ದಾಣ ಕಸದ ಕೊಂಪೆಯಾಗುವುದು ತಪ್ಪುತ್ತದೆ ಎಂದು ಸಾರ್ವಜನಿಕರು ಪತ್ರಿಕೆ ಮೂಲಕ ಅಭಿಪ್ರಾಯಿಸಿದ್ದಾರೆ.