ಕೂಡಿಗೆ, ಮಾ. ೨೬: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಬ್ಯಾಡಗೊಟ್ಟ ಗ್ರಾಮದಲ್ಲಿ ಕಸ ವಿಲೇವಾರಿ ಘಟಕವನ್ನು ಆರಂಭ ಮಾಡುವ ಬಗ್ಗೆ ಬಂದಿರುವ ದೂರಿನ ಬಗ್ಗೆ ಸುರ್ದಿಘವಾಗಿ ಚರ್ಚಿಸಿ ನಂತರ ಕೆಲ ದಿನಗಳವರೆಗೆ ಪರಿಸ್ಥಿತಿಯನ್ನು ನೋಡಿ ನಂತರ ಜಿಲ್ಲಾಧಿಕಾರಿ ಅವರನ್ನು ಅಡಳಿತ ಮಂಡಳಿಯ ಸರ್ವ ಸದಸ್ಯರು ಭೇಟಿ ಮಾಡುವಂತೆ ತೀರ್ಮಾನ ಕೈಗೊಳ್ಳಲಾಯಿತು.

ನಂತರ ಹುದುಗೂರು ಗ್ರಾಮದಲ್ಲಿ ನಿವೇಶನ ರಹಿತರಿಗೆ ಕಾಯ್ದಿರಿಸಿರುವ ಜಾಗದ ದಾಖಲೆಯು ನಕಲಿಯಾಗಿದೆ ಎಂಬ ದೂರು ಬಂದಿರುವ ಬಗ್ಗೆ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲಾಯಿತು. ಅಲ್ಲದೆ ಅರಣ್ಯ ಇಲಾಖೆಯ ಸರ್ವೆ ನಂಬರ್ ೮/೨ ಜಾಗವು ಹಾಡಿಯವರ ಜಾಗವಾಗಿದ್ದು, ಆ ಜಾಗವನ್ನು ತಾಲೂಕು ಪಂಚಾಯಿತಿ ಹೆಸರಿಗೆ ಖಾತೆಯಾಗಿರುವ ಬಗ್ಗೆ ಚರ್ಚೆಗಳು ನಡೆದು, ಕಂದಾಯ ಇಲಾಖೆಗೆ ಪತ್ರ ವ್ಯವಹಾರ ನಡೆಸಿ ಖಾಲಿ ಜಾಗದ ದಾಖಲೆಯನ್ನು ಸರಿಪಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಚರಂಡಿ ನಿರ್ಮಾಣ ಮತ್ತು ಉಪ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲು ಸಿದ್ಧತೆ ಮಾಡಲು ಎಲ್ಲ ಸದಸ್ಯರು ಸಲಹೆಯನ್ನು ನೀಡಿದರು.

ಬೇಸಿಗೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆ ಮಾಡಲು ಸಂಬAಧಿಸಿದವರಿಗೆ ಸೂಚನೆ ನೀಡುವಂತೆ ಸದಸ್ಯರುಗಳು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಸಾರ್ವಜನಿಕರ ಪತ್ರಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಉದ್ಯೋಗ ಖಾತರಿ ಮತ್ತು ನರೇಗಾ ಯೋಜನೆಗೆ ನೋಂದಣಿ ಮಾಡಿಕೊಂಡು ಗ್ರಾಮದ ಕಾಮಗಾರಿಯನ್ನು ಕೈಗೊಳ್ಳಲು ಸಹಕಾರ ನೀಡುವಂತೆ ಯೋಜನೆ ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಅರುಣ್ ರಾವ್, ಶಿವಕುಮಾರ್, ವಾಣಿ ರತ್ನಮ್ಮ, ಹೆಚ್.ಎಸ್. ರವಿ, ವಿ. ಜಯಶ್ರೀ, ಪಲ್ಲವಿ, ಟಿ.ಪಿ. ಹಮೀದ್, ಕೆ.ಟಿ. ಗಿರೀಶ್, ಲಕ್ಮಿ, ಅನಂತ, ಚಂದ್ರು, ಜಯಶೀಲ ಕಾರ್ಯದರ್ಶಿ ಶಿಲ್ಪಾ ಹಾಜರಿದ್ದರು.