ಮಡಿಕೇರಿ, ಮಾ. ೨೬: ಹುಲಿತಾಳದ ಡಾ.ಭೀಮರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಮತು ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ವತಿಯಿಂದ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ೧೯ನೇ ವರ್ಷದ ಜೈ ಭೀಮ್ ಕ್ರಿಕೆಟ್ ಕಪ್‌ಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಂಜಾಟದ ನಡುವೆ ಕ್ರೀಡೆಗಳು ಉತ್ಸಾಹವನ್ನು ಚಿಗುರಿಸುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ ಯಾಗಿದೆ. ಜನಾಂಗದ ಒಗ್ಗೂಡುವಿಕೆಗೆ ಈ ರೀತಿಯ ಕ್ರೀಡಾಕೂಟಗಳು ಆಯೋಜನ ಗೊಳ್ಳಬೇಕು. ಪಂದ್ಯಾಟ ಯಶಸ್ವಿ ಯಾಗಲಿ. ಮುಂದಿನ ದಿನದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸುವಂತಾಗಲಿ ಎಂದು ಹಾರೈಸಿದರು.

ಯುವಜನ ಸೇವ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಗುರುಸ್ವಾಮಿ ಮಾತನಾಡಿ, ಶಿಕ್ಷಣ ಉತ್ತಮ ಪ್ರಜೆಯನ್ನು ಸೃಷ್ಟಿಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನ ಅರ್ಥಪೂರ್ಣವಾಗುತ್ತದೆ. ಶಿಕ್ಷಣದೊಂದಿಗೆ ಆರೋಗ್ಯದ ದೃಷ್ಟಿ ಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

೩ ದಿನಗಳ ಕಾಲ ನಡೆಯುವ ಪಂದ್ಯಾಟದಲ್ಲಿ ಜಿಲ್ಲೆಯ ೩೪ ತಂಡಗಳು ಭಾಗವಹಿಸುತ್ತಿದ್ದು, ತಾ. ೨೮ ರಂದು ಫೈನಲ್ ಪಂದ್ಯಾಟ ನಡೆಯಲಿದೆ.

ಸಮಿತಿಯ ಅಧ್ಯಕ್ಷ ಹೆಚ್.ಟಿ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಅರ್ಪಿತಾ, ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷೆ ಸುಜಾತ ಚಂದ್ರಶೇಖರ್, ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಸದಸ್ಯ ಈರ ಸುಬ್ಬಯ್ಯ, ಮಾಜಿ ಗ್ರಾ.ಪಂ ಸದಸ್ಯ ಹೆಚ್.ಆರ್ ರವಿ, ಸೈನಿಕ ರಾಜೇಶ್ ಸೇರಿದಂತೆ ಇನ್ನಿತರರು ಇದ್ದರು.