ಕುಶಾಲನಗರ, ಮಾ.೨೬: ಕುಶಾಲನಗರ ಪಟ್ಟಣ ಪಂಚಾಯತಿ ೨೦೨೧-೨೨ ನೆಯ ಸಾಲಿನ ಅಂದಾಜು ಅಯ-ವ್ಯಯ ಮಂಡನೆ ನಡೆಯಿತು. ೩ ಲಕ್ಷದ ೬೬ ಸಾವಿರದ ೩೮೩ ರೂ.ಗಳ ಉಳಿತಾಯ ಬಜೆಟ್ ಅನ್ನು ಅಧ್ಯಕ್ಷ ಜೈವರ್ಧನ್ ಮಂಡಿಸಿದರು.
೨೦೨೧-೨೨ ನೇ ಸಾಲಿಗೆ ನಿರೀಕ್ಷಿತ ಆದಾಯ ರೂ.೨೧ ಕೋಟಿ ನಾಲ್ಕು ಲಕ್ಷದ ೬೩ ಸಾವಿರ ಆಗಿದ್ದು, ನಿರೀಕ್ಷಿತ ಖರ್ಚು ರೂ.೨೧ ಕೋಟಿ ೯೬ ಸಾವಿರ ಅಂದಾಜು ಪಟ್ಟಿಗೆ ಆಡಳಿತ ಮಂಡಳಿ ಅನುಮೋದನೆ ನೀಡಿದೆ.ಆಸ್ತಿ ತೆರಿಗೆ ಮೂಲಕ ೧೮೦ ಲಕ್ಷ ರೂ. ನಿರೀಕ್ಷಿಸಲಾಗಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ೬.೭೮ ಕೋಟಿ ರೂ. ಗಳ ಅನುದಾನಗಳನ್ನು ಅಂದಾಜಿಸಲಾಗಿದ್ದು ಉಳಿದಂತೆ ಸರಕಾರಗಳ ವಿಶೇಷ ಅನುದಾನ ಮೂಲಕ ಪಟ್ಟಣದ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಜೈವರ್ಧನ್ ತಿಳಿಸಿದರು.
ಪಟ್ಟಣದ ಕಾವೇರಿ ಬಡಾವಣೆಯ ವಾಣಿಜ್ಯ ಕಟ್ಟಡಗಳ ದುರಸ್ತಿ, ನಿರ್ವಹಣೆ, ವೆಂಕಟೇಶ್ವರ ಥಿಯೇಟರ್ ಕಟ್ಟಡವನ್ನು ಕಲ್ಯಾಣ ಮಂಟಪವನ್ನಾಗಿ ಮಾರ್ಪಾಟು ಮಾಡಲು ಬಜೆಟ್ ನಲ್ಲಿ ಹಣ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ. ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಎರಡೂ ಕಡೆ ಪೆನ್ಸಿಂಗ್ ಅಳವಡಿಸಲು ಬಜೆಟ್ ನಲ್ಲಿ ಹಣ ಮೀಸಲಿರಿಸಲಾಗಿದೆ ಆ ಮೂಲಕ ನದಿ ಸ್ವಚ್ಛತೆ ಗೆ ಆದ್ಯತೆ ನೀಡಿರುವುದು, ಉಳಿದಂತೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಗಮನಹರಿಸಲಾಗಿದೆ ಎಂದು ಜೈವರ್ಧನ್ ತಿಳಿಸಿದರು.
ಬಜೆಟ್ ಅನುಮೋದನೆ ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ಸದಸ್ಯ ಪ್ರಮೋದ್ ಮುತ್ತಪ್ಪ , ಇದೊಂದು ನಿರಾಶಾದಾಯಕ ಬಜೆಟ್ ಎಂದರಲ್ಲದೆ ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುವ ಸಾಧ್ಯತೆ ಇರುವುದಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸದಸ್ಯರು ಹಾಗೂ ಚೇಂಬರ್ ಅಧ್ಯಕ್ಷ ಅಮೃತ ರಾಜ್ ಪ್ರತಿಕ್ರಿಯಿಸಿ, ಈ ಸಾಲಿನಲ್ಲಿ ಪಂಚಾಯಿತಿ ಮೂಲಕ ವರ್ತಕರ ಮೇಳ ಆಯೋಜಿಸಿ ಅವರ ಸಮಸ್ಯೆ ಪರಿಹರಿಸಲು ಚಿಂತನೆ ಹರಿಸಲಾಗಿದೆ. ವ್ಯಾಪಾರಿಗಳಿಗೆ ವಿಧಿಸುವ ತೆರಿಗೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಉದ್ಯಮಿಗಳ ಸಭೆ ಕರೆಯುವ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ಉತ್ತಮವಾಗಿದೆ ಎಂದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುರಯಾಭಾನು, ಸ್ಥಾಯಿ ಸಮಿತಿಯ ಸುರೇಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸೇರಿದಂತೆ ಸದಸ್ಯರು, ನಾಮನಿರ್ದೇಶನ ಸದಸ್ಯರು, ಅಧಿಕಾರಿ ಸಿಬ್ಬಂದಿ ಇದ್ದರು.