ಮಡಿಕೇರಿ, ಮಾ. ೨೫: ತೋಟ ಮಾಲೀಕರು ತಮ್ಮ ತೋಟಗಳಲ್ಲಿ ಕೆಲಸಕ್ಕಾಗಿ ಬಿದಿರು ಅಥವಾ ಫೈಬರ್ ಏಣಿಗಳನ್ನು ಬಳಸಿಕೊಳ್ಳಿ ; ಅಲ್ಯುಮಿನಿಯಂ ಏಣಿಗಳನ್ನು ಬಳಸಬೇಡಿ. ಒಂದು ವೇಳೆ ಅದನ್ನು ಬಳಸುವುದಾದರೆ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿ ಪ್ರಾಣ ಹಾನಿ ತಪ್ಪಿಸಿ ಎಂದು ಸೆಸ್ಕಾಂ ಕಾರ್ಯಪಾಲಕ ಅಭಿಯಂತರರಾದ ಎಂ ಪಿ ಅಶೋಕ್ ಮನವಿ ಮಾಡಿದ್ದಾರೆ.ನಗರದ ಸೆಸ್ಕ್ ಉಪ ವಿಭಾಗ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.ಕೊಡಗಿನ ತೋಟಗಳಲ್ಲಿ ಅಲ್ಯುಮಿನಿಯಂ ಏಣಿಗಳನ್ನು ಬಳಸುವುದರಿಂದ ವಿದ್ಯುತ್ ಸ್ಪರ್ಶಗೊಂಡು ಹಲವು ಕಾರ್ಮಿಕರು ಪ್ರಾಣ ಕಳೆದು ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತೋಟ ಮಾಲೀಕರು ಬಿದಿರು , ಫೈಬರ್ ಏಣಿಗಳ ಬಳಕೆಗೆ ಆದ್ಯತೆ ನೀಡಿ ಅಲ್ಯುಮಿನಿಯಂ ಏಣಿ ಬಳಕೆಯನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.(ಮೊದಲ ಪುಟದಿಂದ) ಒಂದು ವೇಳೆ ಅಲ್ಯುಮಿನಿಯಂ ಏಣಿ ಬಳಕೆ ಅನಿವಾರ್ಯವಾದರೆ ಅವುಗಳನ್ನು ಕೆಲಸಕ್ಕೆ ಬಳಸುವ ಮುನ್ನ ಸಂಬAಧಿಸಿದ ಲೈನ್ ಮೆನ್ ಅಥವಾ ಸಮೀಪದ ವಿದ್ಯುತ್ ಇಲಾಖೆ ಉಪ ಕಚೇರಿಗಳಿಗೆ ತೋಟ ಮಾಲೀಕರು ಮನವಿ ಪತ್ರ ನೀಡಲಿ. ಅದರನ್ವಯ ಕೆಲಸದ ಸಂದರ್ಭ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಯಾವುದೇ ಪ್ರಾಣ ಹಾನಿ ಸಂಭವಿಸದAತೆ ವಿದ್ಯುತ್ ಇಲಾಖೆ ಸಹಕಾರ ನೀಡಲಿದೆ ಎಂದು ಅಶೋಕ್ ಭರವಸೆಯಿತ್ತರು. ವಿದ್ಯುತ್ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಅಲ್ಯುಮಿನಿಯಂ ಏಣಿ ಬಳಸಿ ಕೆಲಸ ಮಾಡುವುದರಿಂದ ವಿದ್ಯುತ್ ಸ್ಪರ್ಶಗೊಂಡು ಸಾವು ನೋವುಗಳು ಸಂಭವಿಸುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ತೋಟ ಮಾಲೀಕರು ಮನವಿ ಪತ್ರ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿಕೊಂಡು ಕೆಲಸ ನಿರ್ವಹಿಸುವಂತಾಗಲಿ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಹಾದು ಹೋಗಿರುವ ಕಡೆಗಳಲ್ಲಿ ಅಡ್ಡಲಾಗಿರುವ ಮರದ ರೆಂಬೆಗಳನ್ನು ಕಡಿದು ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಲೈನ್ ಮೆನ್ ಗಳ ಕೊರತೆ ಇದ್ದು , ಸರ್ಕಾರದಿಂದ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಒಂದು ವೇಳೆ ಮಳೆಗಾಲಕ್ಕೂ ಮುನ್ನ ಈ ಪ್ರಕ್ರಿಯೆ ನಡೆಯದಿದ್ದರೆ ಹೊರ ಭಾಗದಿಂದ ಲೈನ್ ಮೆನ್ ಗಳ ಕರೆಸಿಕೊಂಡು ಕಾರ್ಯನಿರ್ವಹಿಸಲಾಗುತ್ತದೆ ಎಂದು ಅಶೋಕ್ ಹೇಳಿದರು.

ಬೀದಿ ದೀಪಗಳ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳು ಮಾಡಬೇಕಿದ್ದು , ಇಲಾಖೆಯ ನೆರವು ಬೇಕಿದ್ದಲ್ಲಿ ನೀಡುತ್ತೇವೆ. ಕೊಡಗಿನ ಮಾದಾಪುರ, ಬಾಳೆಲೆ, ಸಿದ್ದಾಪುರ, ಹಾನಗಲ್ಲು, ಕೋಪಟ್ಟಿ ಸೇರಿದಂತೆ ಹತ್ತು ಕಡೆಗಳಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭ ಸೋಮವಾರಪೇಟೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಧನಂಜಯ ಅವರು ಉಪಸ್ಥಿತರಿದ್ದರು.