*ಸಿದ್ದಾಪುರ, ಮಾ. ೨೫: ಅಭ್ಯತ್ ಮಂಗಲ, ಅತ್ತಿಮಂಗಲ ಜಂಕ್ಷನ್‌ನಲ್ಲಿ ಇಂದು ಹಾಡಹಗಲೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗುವ ಮೂಲಕ ಸುತ್ತಮುತ್ತಲ ಗ್ರಾಮದಲ್ಲಿ ಆತಂಕ ಮೂಡಿಸಿದೆ.
ಜಂಕ್ಷನ್ ಬಳಿ ಒಂದು ಬದಿಯಿಂದ ಮತ್ತೊಂದು ಬದಿಗೆ ಆನೆ ಸಂಚರಿಸಿದ್ದು, ದ್ವಿಚಕ್ರ ವಾಹನ ಚಾಲಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಕಳೆದ ಒಂದು ವಾರದಿಂದ ಸುಮಾರು ೪ ಕಾಡಾನೆಗಳು ಸಂಚರಿಸುತ್ತಿದ್ದು, ತೋಟಗಳಿಗೆ ಹಾನಿ ಮಾಡಿವೆ. ಸ್ಥಳೀಯ ಗ್ರೀನ್ ಫೀಲ್ಡ್ ಎಸ್ಟೇಟ್‌ನಲ್ಲಿ ಕಾಡಾನೆಗಳೊಂದಿಗೆ ಕಾಡುಕೋಣ ಕೂಡ ಸೇರಿಕೊಂಡಿದ್ದು, ಗಿಡಗಳು ಹಾಳಾಗಿವೆ.ತಕ್ಷಣ ವನ್ಯಜೀವಿಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.