ಸೋಮವಾರಪೇಟೆ, ಮಾ. ೨೩: ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ಮಸಗೋಡು-ತಣ್ಣೀರುಹಳ್ಳದ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಲ್ಲುಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇಲಾಖಾಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸೋಮವಾರಪೇಟೆ-ಬಾಣಾವಾರ-ಕೊಣನೂರು ರಾಜ್ಯ ಹೆದ್ದಾರಿಯ ಮಸಗೋಡು ಜಂಕ್ಷನ್ ಸಮೀಪ ರಸ್ತೆ ಕಿರಿದಾಗಿದೆ. ಮೇಲ್ಭಾಗದ ಕಾಫಿ ತೋಟದಿಂದ ಸಾಧಾರಣ ಗಾತ್ರದ ಕಲ್ಲುಗಳು ರಸ್ತೆಯ ಪಕ್ಕಕ್ಕೆ ಉರುಳಿ ಸಂಗ್ರಹವಾಗುತ್ತಿವೆ. ಇನ್ನೊಂದು ಭಾಗದಲ್ಲಿ ಇಳಿಜಾರು ಪ್ರದೇಶವಿದೆ. ತಿರುವು ರಸ್ತೆಯೂ ಇದೆ. ಈ ಜಾಗದಲ್ಲಿ ಎದುರು ಬದುರು ಎರಡು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ವಾಹನ ಚಾಲಕರು ಪ್ರತಿದಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಸವಾರರು ದೂರಿದ್ದಾರೆ.

ಲೋಕೋಪಯೋಗಿ ಇಲಾಖೆಯ ವತಿಯಿಂದ ವರ್ಷದಲ್ಲಿ ಎರಡು ಬಾರಿ ರಸ್ತೆ ನಿರ್ವಹಣೆಗೆ ಹಣ ಬಿಡುಗಡೆಯಾಗುತ್ತದೆ. ಆದರೆ ಈ ಜಾಗದಲ್ಲಿ ಕಲ್ಲುಗಳನ್ನು ತೆರವುಗೊಳಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಸತೀಶ್ ದೂರಿದ್ದಾರೆ. ಕೂಡಲೇ ಕಲ್ಲುಗಳನ್ನು ಇಲಾಖೆ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.