ಮಡಿಕೇರಿ, ಮಾ. ೨೩: ಸಂವೇದನ ದಿನದ ಅಂಗವಾಗಿ ನ್ಯಾಷನಲ್ ಇಂಟಿಗ್ರೇಟೆಡ್ ಫೋರಂ ಆಫ್ ಆರ್ಟಿಸ್ಟ್ ಆ್ಯಂಡ್ ಆ್ಯಕ್ಟಿವಿಟೀಸ್ ಸಂಸ್ಥೆ (ನೀಮ) ವತಿಯಿಂದ ಭಾರತೀಯ ರೆಡ್ ಕ್ರಾಸ್, ಬ್ಮಹ್ಮಕುಮಾರಿಸ್, ಮಡಿಕೇರಿ ಎಫ್.ಎಂ.ಸಿ. ಕಾಲೇಜು, ನಗರ ಬಿಜೆಪಿ ಯುವಮೋರ್ಚ ಹಾಗೂ ಇನ್ನಿತರ ಸಂಘಟನೆ ಸಹಯೋಗದಲ್ಲಿ ನಗರದ ಬಾಲ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಭಗತ್ ಸಿಂಗ್, ರಾಜಗುರು, ಸುಖದೇವ್ ಬಲಿದಾನ ದಿನ ಹಿನ್ನೆಲೆ ರಾಷ್ಟçವ್ಯಾಪಿ ೧೫೦೦ ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ೯೦ ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆ ವಿವಿಧ ಸಂಘ ಸಂಸ್ಥೆಯ ಸ್ವಯಂ ಸೇವಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರೂ ಸಂಖ್ಯೆಯಲ್ಲಿ ರಕ್ತದಾನಿಗಳು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಈ ಸಂದರ್ಭ ಪ್ರಮಾಣ ಪತ್ರ ವಿತರಿಸಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ಉತ್ತಮ ಗುರಿಯೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ೩ ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಆರೋಗ್ಯಕ್ಕೆ ಕೂಡ ಉತ್ತಮ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಕ್ತದಾನ ಮಾಡುವಂತೆ ಕರೆ ನೀಡಿದ ಅವರು, ಅಪರೂಪ ರಕ್ತದ ಗುಂಪು ಹೊಂದಿರುವವರನ್ನು ಗುರುತಿಸಿಟ್ಟು ಕೊಂಡು ಅಗತ್ಯವಿದ್ದಾಗ ರಕ್ತ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸಬೇಕು. ಜಿಲ್ಲಾಡಳಿತದೊಂದಿಗೆ ಕೈಜೋಡಿಸು ವಂತೆ ಮನವಿ ಮಾಡಿದರು.
ರೆಡ್ಕ್ರಾಸ್ ಸೊಸೈಟಿ ಸಭಾಪತಿ ರವೀಂದ್ರ ರೈ ಮಾತನಾಡಿ, ಸೂಕ್ತ ಸಮಯದಲ್ಲಿ ರಕ್ತ ದೊರಕಬೇಕು. ಈ ನಿಟ್ಟಿನಲ್ಲಿ ಶಿಬಿರ ಸಹಕಾರಿಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಕೂಡ ಜಿಲ್ಲೆಯ ಜನ ರಕ್ತದಾನ ಮಾಡಿ ಜೀವ ಉಳಿವಿಗೆ ಕಾರಣರಾಗುತ್ತಿದ್ದಾರೆ ಎಂದರು.
ನಿವೃತ್ತ ಸೈನಿಕ ಅಚ್ಚಯ್ಯ, ನೀಮ ಸಂಸ್ಥೆಯ ಅಧ್ಯಕ್ಷ ರಾಜರಾಮ್, ಬಿಜೆಪಿ ಯುವಮೋರ್ಚಾ ನಗರಾಧ್ಯಕ್ಷ ನವೀನ್ ಪೂಜಾರಿ ಸೇರಿದಂತೆ ಇನ್ನಿತರರು ಇದ್ದರು.
ರಾಜರಾಮ್ ಸ್ವಾಗತಿಸಿ, ಡಾ. ಸೌಮ್ಯ ಗಣರಾಜ್ ನಿರೂಪಿಸಿ, ಡಾ. ಉದಯಶಂಕರ್ ನಿರೂಪಿಸಿದರು.