ಮುಳ್ಳೂರು, ಮಾ. ೨೩: ಶನಿವಾರಸಂತೆ ಕ್ಲಸ್ಟರ್ ವ್ಯಾಪ್ತಿಯ ಚಿಕ್ಕ ಕೊಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಬಾಲ ಪ್ರತಿಭೆ ಕವಿಯತ್ರಿ ಎಸ್.ಜಿ. ಗಾಯತ್ರಿ ಅವರ ಚೊಚ್ಚಲ ಕೃತಿ ‘ಬೊಗಸೆ ತುಂಬಿದ ಭಾವ ತುಂತುರು’ ಕವನ ಸಂಕಲನವನ್ನು ಅನಾವರಣಗೊಳಿಸಲಾಯಿತು. ಚಿಕ್ಕ ಕೊಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕವನ ಸಂಕಲನ ಅನಾವರಣ ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಪೋಷಕ ಮತ್ತು ಶಾಲೆಗಳಲ್ಲಿ ಮಕ್ಕಳು ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳು ಪ್ರಗತಿ ಸಾಧಿಸುವ ಮೂಲಕ ಭವಿಷ್ಯದಲ್ಲಿ ಅವರು ಹಣ ಸಂಪಾದನೆ ಮಾಡುವಂತೆ ಪ್ರೋತ್ಸಾಹಿಸುತ್ತಾರೆ ಆದರೆ ಕೇವಲ ಹಣ ಸಂಪಾದನೆ ಮಾಡುವುದು ಮುಖ್ಯವಾಗುವುದಿಲ್ಲ, ನಾವೆಲ್ಲರೂ ಹಣಗಳಿಕೆಗಿಂತ ಸುಖ, ಶಾಂತಿ ನೆಮ್ಮದಿ ಮುಖ್ಯ ಎಂಬುವುದನ್ನು ಆತ್ಮಲೋಕನ ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಲಾ ವಿಷಯವನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಸಾಹಿತ್ಯ ಕ್ಷೇತ್ರ ವಿಜ್ಞಾನ ಕ್ಷೇತ್ರಕಿಂತ ಮಿಗಿಲಾದದ್ದು, ಈ ದಿಸೆಯಲ್ಲಿ ಶಾಲೆಗಳಲ್ಲಿ ಕಥೆ, ಕವನ ಮುಂತಾದ ಸಾಹಿತ್ಯಾಸಕ್ತಿ ಇರುವ ಪ್ರತಿಭೆಗಳನ್ನು ನಾವೆಲ್ಲರೂ ಗುರುತಿಸಬೇಕು ಎಂದರು.

ಶನಿವಾರಸAತೆ ಕ್ಲಸ್ಟರ್ ಸಿಆರ್‌ಪಿ ದಿನೇಶ್ ಕವನ ಸಂಕಲನ ಮತ್ತು ಕೃತಿ ಬರೆದ ಶಾಲೆಯ ವಿದ್ಯಾರ್ಥಿನಿ ಗಾಯತ್ರಿ ಕುರಿತು ಮತ್ತು ಕವನ ಸಂಕಲನ ಹೊರತರಲು ಕಾರಣಕರ್ತರಾದವರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಯ್ಯಾದ್ ಅಧ್ಯಕ್ಷತೆವಹಿಸಿದರು. ಕವನ ಸಂಕಲನದಲ್ಲಿ ವ್ಯಕ್ತವಾಗಿರುವ ಕವನಗಳ ಬಗ್ಗೆ ಶಿಕ್ಷಕಿ ಕಾವ್ಯ ಮಾತನಾಡಿದರು, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕೀರ್ತಿ, ಹಿರಿಯ ಸದಸ್ಯ ಡಿ.ಬಿ. ಬೋಜಪ್ಪ, ಹಂಡ್ಲಿ ಸಿಆರ್‌ಪಿ ಮನೋಹರ್, ಬಿಆರ್‌ಪಿ ಮಧುಕುಮಾರ್, ಮಕ್ಕಳ ಸಹಾಯವಾಣಿ ಕೇಂದ್ರದ ತಾಲೂಕು ಕಾರ್ಯಕರ್ತೆ ಬಿ.ಆರ್. ಕುಮಾರಿ ಮಾತನಾಡಿದರು.

ಸಮಾರಂಭದಲ್ಲಿ ಶನಿವಾರಸಂತೆ ಹೋಬಳಿ ಕಸಾಪ ಅಧ್ಯಕ್ಷ ಬಿ.ಬಿ. ನಾಗರಾಜ್, ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಪ್ರಾಂಶುಪಾಲ ಶಿವಪ್ರಕಾಶ್, ಪ್ರಮುಖರಾದ ಪುಟ್ಟಸ್ವಾಮಿ, ಪ್ರದೀಪ್ ಮುಂತಾದವರಿದ್ದರು. ಕವವ ಸಂಕಲನ ಬರೆದ ವಿದ್ಯಾರ್ಥಿನಿ ಗಾಯತ್ರಿ ಪುಸ್ತಕ ಹೊರತರಲು ಕಾರಣಕರ್ತರಾದವರನ್ನು ಮತ್ತು ಪ್ರೋತ್ಸಾಹ ನೀಡಿದವರನ್ನು ತನ್ನ ಕವಿತೆ ವಾಚನ ಮೂಲಕ ಧನ್ಯವಾದ ತಿಳಿಸಿದರು.