ಸಿದ್ದಾಪುರ, ಮಾ. ೨೨: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಬಾಡಗ ಬಾಣಂಗಾಲದಲ್ಲಿ ಇದೀಗ ಹುಲಿಯೊಂದು ಕರುವೊಂದರ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡ ಘಟನೆ ನಡೆದಿದೆ.

ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಗೋವಿಂದ ಎಂಬವರಿಗೆ ಸೇರಿದ ಕರುವೊಂದರ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು, ಚಿಂತಾಜನಕ ಸ್ಥಿತಿಯಲ್ಲಿದ್ದ ಕರು ಮೃತಪಟ್ಟಿದೆ.

ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್ ಹಾಗೂ ಗ್ರಾ.ಪಂ. ಸದಸ್ಯರುಗಳು ಭೇಟಿ ನೀಡಿದರು. ವ್ಯಾಘ್ರನ ಉಪಟಳದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದಲ್ಲದೇ ಚಿರತೆಗಳು ಕೂಡ ಮಾಲ್ದಾರೆ ಹಾಗೂ ಗುಡ್ಲೂರು ವ್ಯಾಪ್ತಿಯಲ್ಲಿ ಕೆಲವು ಗ್ರಾಮಸ್ಥರ ನಾಯಿಗಳ ಮೇಲೆ ದಾಳಿ ನಡೆಸಿ ಸಾಯಿಸಿರುವ ಘಟನೆಗಳು ಕೂಡ ಆಗಿಂದಾಗ್ಗೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ವನ್ಯಜೀವಿಗಳ ಹಾವಳಿಯಿಂದಾಗಿ ಬೆಳೆಗಾರರು ಹಾಗೂ ಕಾರ್ಮಿಕರು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಲು ಆತಂಕಪಡುವAತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ವನ್ಯಜೀವಿಗಳ ಹಾವಳಿಗೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.