ಶಾಸಕ ರಂಜನ್ ಪ್ರಶ್ನೆಗೆ ಸಚಿವರ ಉತ್ತರ
ಮಡಿಕೇರಿ, ಮಾ. ೨೨: ಕೊಡಗು ಜಿಲ್ಲೆಗೆ ಕಳೆದ ಮೂರು ವರ್ಷಗಳಿಂದ ವಿವಿಧ ವಸತಿ ಯೋಜನೆಯಡಿ ಒಟ್ಟು ೩೬೫೮ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ರಾಜ್ಯ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಗೆ ವಿವಿಧ ಯೋಜನೆಯಡಿ ಎಷ್ಟು ಮನೆಗಳು ಮಂಜೂರು ಮಾಡಲಾಗಿದೆ ಎಂಬ ಶಾಸಕರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ವಿವಿಧ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಭೂ ಪರಿವರ್ತನೆ ಸಂಬAಧ ನಿರಾಕ್ಷೇಪಣೆ ಕೋರಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಎಷ್ಟು, ಪತ್ರ ನೀಡಲು ನಡೆಸಲಾಗಿರುವ ಸಭೆಗಳೆಷ್ಟು ಎಂಬ ಶಾಸಕರ ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವ ಆರ್ ಅಶೋಕ್ ಅವರು, ಸರಕಾರದ ಆದೇಶ ತಾ.೪.೬.೨೦೨೦ರಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಭೂಪರಿವರ್ತನೆ ನಿರಾಕ್ಷೇಪಣೆ ಪತ್ರ ಕೋರಿ ಒಟ್ಟು ೧೧೫ ಅರ್ಜಿಗಳು ಸ್ವೀಕೃತವಾಗಿರುತ್ತವೆ, ಈ ಬಗ್ಗೆ ಒಟ್ಟು ಮೂರು ಸಭೆಗಳನ್ನು ನಡೆಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.