ಮಡಿಕೇರಿ, ಮಾ. ೨೨: ಅಮರ ಸೇನಾನಿ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಅನುದಾನ ಲಭ್ಯವಾದ ಬಳಿಕ ಆರಂಭಿಸಲಾಗುವುದು ಎಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಉತ್ತರಿಸಿದರು.
ಮ್ಯೂಸಿಯಂನ ಮುಂದಿನ ಕಾರ್ಯನಿರ್ವಹಣೆಗಾಗಿ ಬೇಕಾಗಿರುವ ಖರ್ಚುವೆಚ್ಚ, ಸೂಕ್ತ ನಿರ್ವಹಣೆಗೆ ಸರಕಾರ ಕೈಗೊಂಡ ಕ್ರಮದ ಬಗ್ಗೆ ವೀಣಾ ಅಚ್ಚಯ್ಯ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ರೂ ೫.೫೦ ಕೋಟಿ ವೆಚ್ಚದ ಆಡಳಿತಾ ತ್ಮಕ ಅನುಮೋದನೆ ನೀಡಿದ್ದು, ರೂ ೩.೨೫ ಕೋಟಿ ವಿನಿಯೋಗಿಸಲಾಗಿದೆ. ರೂ ೨.೨೫ ಕೋಟಿ ಹಣ ಬಿಡುಗಡೆಯಾಗ ಬೇಕಾಗಿದೆ. ಮ್ಯೂಸಿಯಂ ಸುತ್ತ ತಡೆಗೋಡೆ ನಿರ್ಮಾಣವಾಗಬೇಕಾಗಿದೆ. ಸೇನಾ ಮಾಹಿತಿ ಕೇಂದ್ರ ಸ್ಥಾಪಿಸಬೇಕಾಗಿದೆ. ಇದರೊಂದಿಗೆ ಇನ್ನಿತರ ಕೆಲಸಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.
ನಿವೃತ್ತ ಸೇನಾಧಿಕಾರಿಕಾರಿಗಳನ್ನು ಖಾಯಂ ನೇಮಕಾತಿ ಮಾಡುವ ಕುರಿತು ಉತ್ತರಿಸಿದ ಸಚಿವರು, ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕ ಇಲಾಖೆ ನಿಗದಿಪಡಿಸಿದ ದರಗಳ ಆಧಾರದ ಮೇಲೆ ಸ್ಮಾರಕ ಸಮಿತಿಯ ಅನುಮೋದನೆಯೊಂದಿಗೆ ಅವಶ್ಯಕ ನುರಿತ ಸಿಬ್ಬಂದಿಯನ್ನು ನೇಮಿಸಿ ಅವರ ಸೇವೆಯನ್ನು ಬಳಸಿಕೊಂಡು ಈಗಾಗಲೇ ಸ್ಮಾರಕ ನಿರ್ವಹಣೆ ಮಾಡಲಾಗುತ್ತಿದೆ. ೫ ವರ್ಷ ಮೇಲ್ಪಟ್ಟ ಹಾಗೂ ೧೫ ವರ್ಷ ಒಳಪಟ್ಟ ವಿದ್ಯಾರ್ಥಿಗಳಿಗೆ ತಲಾ ರೂ ೧೫, ೧೫ ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ರೂ ೩೦ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.