ಸೋಮವಾರಪೇಟೆ, ಮಾ. ೨೨: ಪುತ್ತೂರಿನಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಬೈಕ್ ಅವಘಡದಲ್ಲಿ ಜಿಲ್ಲೆಯ ವಿದ್ಯಾರ್ಥಿ ಯೋರ್ವ ದುರ್ಮರಣಕ್ಕೀ ಡಾಗಿರುವ ಘಟನೆ ನಡೆದಿದೆ.ಸೋಮವಾರಪೇಟೆ ಪಟ್ಟಣ ಸಮೀಪದ ಮಸಗೋಡು ನಿವಾಸಿ ಬೋಜಪ್ಪ (ಅಡುಗೆ ಬೋಜ) ಹಾಗೂ ಉಮಾವತಿ ದಂಪತಿ ಪುತ್ರ, ಪುತ್ತೂರಿನವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಚೇತನ್ (೨೧) ಮೃತಪಟ್ಟ ದುರ್ದೈವಿ.ನಿನ್ನೆ ತಡರಾತ್ರಿ ಸ್ನೇಹಿತ, ಬೆಳ್ಳಾರೆ ನಿವಾಸಿ ಸುದೀಪ್‌ನೊಂದಿಗೆ ಸವಣೂರು-ಪುತ್ತೂರು ರಸ್ತೆಯ ಮಾಂತೂರು ಎಂಬಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದಿದ್ದಾರೆ.ಪರಿಣಾಮ ಚೇತನ್‌ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾನೆ. ಜೊತೆಗಿದ್ದ ಸುದೀಪ್‌ಗೂ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪುತ್ತೂರಿನ ಪಿ.ಜಿ.ಯಲ್ಲಿದ್ದುಕೊಂಡು ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಚೇತನ್, ನಿನ್ನೆ ದಿನ ಮಾಣಿ ಸಾದಿಕುಕ್ಕು ಜಾತ್ರೆಗೆ ಸ್ನೇಹಿತನೊಂದಿಗೆ ತೆರಳಿ ತಡರಾತ್ರಿ, ಬೆಳ್ಳಾರೆಯಲ್ಲಿರುವ ಸುದೀಪ್‌ನ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

(ಮೊದಲ ಪುಟದಿಂದ) ವಿಷಯ ತಿಳಿಯುತ್ತಿದ್ದಂತೆ ನಿನ್ನೆ ರಾತ್ರಿಯೇ ಕುಟುಂಬಸ್ಥರು ಪುತ್ತೂರಿಗೆ ತೆರಳಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸ್ವಗ್ರಾಮಕ್ಕೆ ತಂದು ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಸಲಾಯಿತು. ಮೃತ ಚೇತನ್ ಪೋಷಕರೊಂದಿಗೆ ಓರ್ವ ಸಹೋದರಿಯನ್ನು ಅಗಲಿದ್ದಾನೆ.