ಗೋಣಿಕೊಪ್ಪಲು. ಮಾ. ೨೧: ದಕ್ಷಿಣ ಕೊಡಗಿನಲ್ಲಿ ಕಳೆದ ೨೭ ದಿನಗಳಿಂದ ಅಪಾಯಕಾರಿಯಾದ ಹುಲಿಯನ್ನು ಸೆರೆಹಿಡಿಯಲು ಹಗಲು ರಾತ್ರಿ ಶತಪ್ರಯತ್ನ ನಡೆಸಿದ್ದ ಅರಣ್ಯ ಇಲಾಖೆಯ ಕಾರ್ಯಾಚರಣೆ ಸದ್ಯದ ಮಟ್ಟಿಗೆ ಸ್ಥಗಿತಗೊಂಡಿದೆ. ಬೆಳ್ಳೂರು ಸರಕಾರಿ ಶಾಲೆಯ ಆವರಣದಲ್ಲಿ ತೆರೆಯಲಾಗಿದ್ದ ಕ್ಯಾಂಪ್ ಅನ್ನು ಮುಚ್ಚಲಾಗಿದೆ. ಲಕ್ಕುಂದ ಬಳಿಯಲ್ಲಿ ಅಪಾಯಕಾರಿ ಹುಲಿಯು ಮೃತಪಟ್ಟ ಹಿನ್ನೆಲೆಯಲ್ಲಿ ನೆಮ್ಮದಿಯ ನಿಟ್ಟಿಸಿರು ಬಿಟ್ಟ ಕಾರ್ಯಾಚರಣೆ ತಂಡ ಶನಿವಾರದಂದು ಕಾರ್ಯಚರಣೆ ಸ್ಥಗಿತಗೊಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ನಿಗಾ ವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಮತ್ತಿಗೋಡು ಆನೆ ಕ್ಯಾಂಪ್ನಿAದ ತರಿಸಲಾಗಿದ್ದ ಐದು ಸಾಕಾನೆಗಳು, ಎ.ಆರ್. ಹಿಲ್ಸ್ನಿಂದ ಬಂದಿದ್ದ ಸೋಲಿಗರ ತಂಡ ವಾಪಾಸ್ಸಾಗಿದ್ದಾರೆ. ಪೊನ್ನಂಪೇಟೆ ನೂತನ ತಾಲೂಕು ವ್ಯಾಪ್ತಿಯಲ್ಲಿ ಫೆ. ೨೦ ರಂದು ಮೊದಲ ಮಾನವ ಜೀವ ಬಲಿಯೊಂದಿಗೆ ಒಟ್ಟು ೩ ಜೀವಗಳನ್ನು ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಹುಲಿ ಸಾವನ್ನಪ್ಪಿರುವುದರಿಂದ ಈ ಭಾಗದ ಗ್ರಾಮಸ್ಥರು ಸದ್ಯದಮಟ್ಟಿಗೆ ನಿರಾಳರಾಗಿದ್ದಾರೆ.
ಭಯ ಹುಟ್ಟಿಸಿದ್ದ ವ್ಯಾಘ್ರ
ಅರಣ್ಯ ಇಲಾಖೆ ಸಿಬ್ಬಂದಿಗಳು ಹಾರಿಸಿದ ಗುಂಡು ತಗುಲಿ ಹುಲಿ ಸಾವನ್ನಪ್ಪಿರುವುದನ್ನು ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಆಗಮಿಸುತ್ತಿದ್ದ ಹುಲಿಯು ಆಗಿಂದಾಗ್ಗೆ ಜನವಸತಿ ಪ್ರದೇಶ, ಕಾಫಿತೋಟಗಳಲ್ಲಿ ಕಾಣಿಸಿಕೊಂಡು ಅರಣ್ಯದಂಚಿನಲ್ಲಿರುವ ಕೆಲವು ಹಸುಗಳನ್ನು ಬೇಟೆಯಾಡಿ ಹಿಂದಿರುಗುತ್ತಿದ್ದವು. ಆದರೆ ಈ ಬಾರಿ ಅರಣ್ಯ ಪ್ರದೇಶದಿಂದ ದೂರದ ಗ್ರಾಮಗಳಾದ ಕುಮಟೂರು, ಟಿ.ಶೆಟ್ಟಿಗೇರಿ ಹಾಗೂ ಬೆಳ್ಳೂರು ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಇದರಿಂದ
(ಮೊದಲ ಪುಟದಿಂದ) ಜನರು ಗಾಬರಿಗೊಂಡಿದ್ದರು. ಫೆ.೨೦ ಸಂಜೆ ೫.೩೦ ಗಂಟೆಗೆ ಕುಮಟೂರು ಗ್ರಾಮದಲ್ಲಿ ೧೪ ವರ್ಷದ ವಿದ್ಯಾರ್ಥಿ ಅಯ್ಯಪ್ಪನನ್ನು ಬಲಿ ಪಡೆದ ಹುಲಿ, ೨೧ ರಂದು ಬೆಳಿಗ್ಗೆ ೭.೩೦ಕ್ಕೆ ಟಿ. ಶೆಟ್ಟಿಗೇರಿ ಗ್ರಾಮದ ೬೫ ವರ್ಷದ ಕಾರ್ಮಿಕ ಮಹಿಳೆ ಚಿಣ್ಣಿಯ ಪ್ರಾಣ ತೆಗೆದಿತ್ತು.
ತಾ. ೮ ರಂದು ಮುಂಜಾನೆ ಬೆಳ್ಳೂರು ಗ್ರಾಮದಲ್ಲಿ ಗುಂಡ್ಲುಪೇಟೆ ತಾಲೂಕು ಬೇಗೂರು ಗ್ರಾಮದ ೫೫ ವರ್ಷದ ಕಾರ್ಮಿಕ ಕೆಂಚಶೆಟ್ಟಿ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿ, ಕೆಂಚಶೆಟ್ಟಿಯ ಮೊಮ್ಮಗ ೮ ವರ್ಷದ ರಂಗಸ್ವಾಮಿಯನ್ನು ಕೊಂದು ಹಾಕಿತ್ತು. ಇದರಿಂದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಗ್ರಾಮಸ್ಥರು, ಸಂಘ, ಸಂಸ್ಥೆಯ ಮುಖಂಡರು ತಿರುಗಿಬಿದ್ದಿದ್ದರು. ರೈತ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿ ದ್ದಂತೆಯೇ ಪ್ರತಿಭಟನೆ ಕಾವು ಹೆಚ್ಚಾಗಿತ್ತು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಹಶೀಲ್ದಾರ್ ೧೪೪ ಸೆಕ್ಷನ್ ಜಾರಿಗೊಳಿಸಿದರೂ ಪ್ರಯೋಜನವಾಗಿರಲಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿದ ತರುವಾಯ, ನೊಂದ ಕುಟುಂಬಕ್ಕೆ ಪರಿಹಾರ ಒದಗಿಸಿದ ನಂತರ ಸಹಜ ಸ್ಥಿತಿಗೆ ಬಂದಿತ್ತು. ಅಂದಿನಿAದ ಅಹೋರಾತ್ರಿ ಪ್ರತಿಭಟನೆ ಬೆಳ್ಳೂರು ಜಂಕ್ಷನ್ ಬಳಿ ಆರಂಭಗೊAಡಿತ್ತು. ನಂತರದ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆದವು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಎಸ್.ಪಿ. ಕ್ಷಮಾ ಮಿಶ್ರಾ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಮಹಿಳೆಯರು ಸೇರಿದಂತೆ ಹಲವಾರು ಮಂದಿ ಇವರ ಕಾರು ಅಡ್ಡಗಟ್ಟಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಸಿಸಿಎಫ್ ಆಗಮಿಸಿ ಹುಲಿ ಸೆರೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು.
ತಾ. ೮ ರಂದು ಗುಂಡೇಟು
ತಾ. ೮ ರಂದು ಬೆಳ್ಳೂರು ಗ್ರಾಮದಲ್ಲಿ ೮ ವರ್ಷದ ಬಾಲಕ ರಂಗಸ್ವಾಮಿಯನ್ನು ಕೊಂದು ಆತನ ಅಜ್ಜ ಕೆಂಚಶೆಟ್ಟಿಯನ್ನು ಗಂಭೀರ ಗಾಯಗೊಳಿಸಿದ ನಂತರ ತೀವ್ರ ಪ್ರತಿಭಟನೆ ನಡೆದ ಹಿನ್ನೆಲೆ ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸಿ ಕೊಲ್ಲಲು ವಿವಿಧ ಸಂಘಟನೆ ಆಗ್ರಹ ಮಾಡಿತ್ತು. ಅರಣ್ಯ ಇಲಾಖೆ ಕಾರ್ಯಾಚರಣೆ ಯನ್ನು ಚುರುಕುಗೊಳಿಸಿ ಆ ದಿನ ಸಂಜೆ ೪.೩೦ಕ್ಕೆ ಅಪಾಯಕಾರಿ ಹುಲಿಯನ್ನು ಸುತ್ತುವರೆದು ಶೂಟರ್ಗಳು ಗುಂಡು ಹಾರಿಸಿದ್ದರು. ಈ ಬಗ್ಗೆ ಆಗಿನ ಸಿಸಿಎಫ್ ಹಿರಲಾಲ್ ಮಾಹಿತಿ ನೀಡಿದ್ದರು. ಈ ಘಟನೆಯಿಂದ ಹುಲಿ ಗಾಯಗೊಂಡು ತಪ್ಪಿಸಿಕೊಂಡಿತ್ತು. ಇದೇ ಹುಲಿಯನ್ನು ಪತ್ತೆ ಮಾಡಲು ಅರಣ್ಯ ಇಲಾಖೆಯ ತಂಡ ಸ್ಥಳೀಯರ ಸಹಕಾರ ಪಡೆದು ನಿರಂತರ ೧೧ ದಿನಗಳವರೆಗೆ ಕಾರ್ಯಾಚರಣೆ ನಡೆಸಿದ್ದರು.
ಹುಲಿಯ ಗುರುತು
ಹುಲಿಗಣತಿ ವೇಳೆ ನಾಗರಹೊಳೆ ರಾಷ್ಟಿçÃಯ ಅಭಯಾರಣ್ಯದ ಕಲ್ಲಳ ವಲಯ ಅರಣ್ಯ ವ್ಯಾಪ್ತಿಯಲ್ಲಿ ೨೦೧೩ ರಲ್ಲಿ ಅಪಾಯಕಾರಿ ಹುಲಿ ಕ್ಯಾಮರಾಕ್ಕೆ ಸೆರೆಯಾಗಿತ್ತು. ಆಗ ಅದಕ್ಕೆ ಮೂರು ವರ್ಷ, ನಂತರ ಈ ವರ್ಷದ ಫೆ. ೨೪ ರಂದು ಬೆಳ್ಳೂರು ಗ್ರಾಮದಲ್ಲಿ ಮತ್ತು ತಾ. ೧೨ ರಂದು ನಾಲ್ಕೇರಿ ಗ್ರಾಮದಲ್ಲಿ ಹಸುವನ್ನು ಕೊಂದ ಸ್ಥಳದಲ್ಲಿ ಇರಿಸಿದ್ದ ಕ್ಯಾಮೆರಾಕ್ಕೆ ಮಾರನೇ ದಿನ ಹಸುವಿನ ಕಳೇಬರ ತಿನ್ನಲು ಬಂದಾಗ ಹುಲಿಯ ಚಿತ್ರ ಸೆರೆಯಾಗಿತ್ತು. ಇದರಿಂದ ಈ ಹುಲಿಯು ೧೩ ಯು ೨೮೫ ಎಂದು ಅರಣ್ಯ ಇಲಾಖೆ ಗುರುತಿಸಿತ್ತು. ಇದೇ ಹುಲಿಯ ಮೃತದೇಹ ಇದೀಗ ಪತ್ತೆಯಾಗಿದೆ.