ಮಡಿಕೇರಿ, ಮಾ. ೨೧: ಮಡಿಕೇರಿ ಅತ್ಯಂತ ಸುಂದರವಾದ ನಗರ, ಆದರೆ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದ ಕಾರಣ ಕಲುಷಿತ ವಾತಾವರಣವಿದ್ದು, ಸ್ಟೋನ್ ಹಿಲ್ ಬಳಿ ಸುರಿಯುತ್ತಿರುವ ತ್ಯಾಜ್ಯಗಳಿಂದಾಗಿ ಕಾಲೇಜಿನ ಆವರಣದಲ್ಲಿ ನೊಣ ಮತ್ತು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದೆೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಚೌರಿರ ಜಗತ್ ತಿಮ್ಮಯ್ಯ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಎನ್‌ಸಿಸಿ ಘಟಕದ ಅಧಿಕಾರಿ ಮೇಜರ್ ಡಾ. ಬಿ. ರಾಘವ ಅವರ ನೇತೃತ್ವದಲ್ಲಿ ನಗರದ ಗದ್ದುಗೆಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಿಂದ ನಡೆದ ಶ್ರಮದಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುಂದರ ನಗರಿಯಾಗಿರುವ ಮಡಿಕೇರಿ ಅತಿ ಹೆಚ್ಚು ತ್ಯಾಜ್ಯಗಳಿಂದ ಕೂಡಿದ್ದು, ಮಾರುಕಟ್ಟೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳಿಂದಾಗಿ ಸುಳಿದಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಸ್ಟೋನ್‌ಹಿಲ್ ಪ್ರದೇಶದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಯಾಗದೇ ಇರುವುದರಿಂದ ಕಾಲೇಜಿನ ಸುತ್ತಮುತ್ತ ನೊಣಗಳು ಹಾರಾಡುತ್ತಿವೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಅಧಿಕಾರಿಗಳು ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ನಗರದ ಆಕರ್ಷಕ ಪ್ರವಾಸಿತಾಣ ಗದ್ದುಗೆಗೆ ಬಣ್ಣ ಬಳಿಯದೆ ಎಷ್ಟೋ ವರ್ಷಗಳಾಗಿದೆ. ಅತೀ ಮಳೆಯಿಂದಾಗಿ ಗೋಪುರಗಳು ಪಾಚಿಕಟ್ಟಿ ಆಕರ್ಷಣೆಯನ್ನು ಕಳೆದುಕೊಂಡಿವೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಎನ್‌ಸಿಸಿ ಕರ್ನಾಟಕ ಬೆಟಾಲಿಯನ್ ಕಾಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ಊರಿನ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.

ಪ್ರಧಾನಮAತ್ರಿಗಳ ಮಹಾತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.

ಎನ್‌ಸಿಸಿ ಘಟಕದ ಅಧಿಕಾರಿ ಮೇಜರ್ ಡಾ. ಬಿ. ರಾಘವ ಮಾತನಾಡಿ, ಭಾರತ ಶ್ರೇಷ್ಠ ಪರಂಪರೆ ಹೊಂದಿರುವ ದೇಶ, ಇದನ್ನು ಸಂರಕ್ಷಿಸಿಕೊAಡು ಹೋಗುವ ಕರ್ತವ್ಯ ಇಂದಿನ ಯುವಜನತೆಯದ್ದಾಗಬೇಕು. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಯುವ ಸಮೂಹ ಯಾಂತ್ರಿಕ ಬದುಕಿಗೆ ಮಾರುಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಎನ್‌ಸಿಸಿ ಅಧಿಕಾರಿ ಕೃಷ್ಣ ತಾಪ್, ಎನ್‌ಸಿಸಿ ವಿದ್ಯಾರ್ಥಿ ನಾಯಕರುಗಳಾದ ಎಂ.ಜೆ. ಪುನೀತ್, ಎಂ.ಎಸ್. ಇಂದ್ರಜಿತ್, ಕೆ. ಶ್ರಾವ್ಯ, ಜಿ. ಸ್ನೇಹ ಎ.ಕೆ. ಯಶೋಧ, ಟಿ.ಆರ್. ರಾಜೇಶ್, ಬಿ.ಎಲ್. ಹರ್ಷಿತಾ ಹಾಗೂ ೪೦ಕ್ಕೂ ಹೆಚ್ಚು ಎನ್‌ಸಿಸಿ ವಿದ್ಯಾರ್ಥಿಗಳು ಗದ್ದುಗೆ ಮತ್ತು ಸುತ್ತಮುತ್ತಲ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು.