ಸೋಮವಾರಪೇಟೆ, ಮಾ.೨೧: ರಾಜ್ಯದ ಪ್ರತಿಷ್ಠಿತ ಸಂಘಗಳಲ್ಲಿ ಒಂದಾಗಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದು, ಕೊಡಗಿನ ಪ್ರಾತಿನಿಧ್ಯಕ್ಕಾಗಿ ಈಗಾಗಲೇ ತಯಾರಿ ಆರಂಭಗೊAಡಿದೆ.

ಪ್ರತಿಷ್ಠೆಯ ಕಣವೆಂದೇ ಬಿಂಬಿಸಲ್ಪಟ್ಟಿರುವ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯಲ್ಲಿ ನಿರ್ದೇಶಕ ಸ್ಥಾನ ಪಡೆಯಲು ಕೊಡಗಿನಿಂದ ಅಭ್ಯರ್ಥಿಗಳು ಸಿದ್ಧವಾಗುತ್ತಿದ್ದು, ಈಗಾಗಲೇ ಉದ್ಯಮಿ ಹಾಗೂ ದಾನಿಗಳೂ ಆಗಿರುವ ಹರಪಳ್ಳಿ ರವೀಂದ್ರ ಅವರು ಬೆಂಬಲಿಗರ ಸಭೆ ನಡೆಸಿ ಚುನಾವಣಾ ಅಖಾಡಕ್ಕೆ ಧುಮುಕುವುದು ಸಿದ್ಧ ಎಂದು ಘೋಷಿಸಿದ್ದಾರೆ.

ಇಲ್ಲಿನ ಕುಸುಬೂರು ಗ್ರ‍್ರಾಮದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ೨೦೦ಕ್ಕೂ ಅಧಿಕ ಮುಖಂಡರ ಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಇಂಗಿತ ಹೊರಹಾಕಿದ್ದು, ಸಭೆಯಲ್ಲಿದ್ದ ಎಲ್ಲರೂ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗೌಡ ಸಮಾಜ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಕ್ಷಾತೀತವಾಗಿ ಬೆಂಬಲ ನೀಡುವ ಭರವಸೆ ಕೊಟ್ಟಿದ್ದು, ಈ ಬಾರಿ ಕೊಡಗಿನಿಂದಲೇ ನಿರ್ದೇಶಕರ ಆಯ್ಕೆಯಾಗಬೇಕು. ಹೊರ ಜಿಲ್ಲೆಯ ಮಂದಿಗೆ ಮಣೆ ಹಾಕುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹರಪಳ್ಳಿ ರವೀಂದ್ರ ಅವರು ಈಗಾಗಲೇ ಸಾಮಾಜಿಕ ಕಾರ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಈವರೆಗೆ ಹೊರ ಜಿಲ್ಲೆಯ ಮಂದಿಯೇ ಕೊಡಗನ್ನು ಪ್ರತಿನಿಧಿಸಿದ್ದಾರೆ. ಈ ಬಾರಿ ಸ್ಥಳೀಯರಿಗೆ ಬೆಂಬಲ ನೀಡುವ ಮೂಲಕ ರಾಜ್ಯ ಒಕ್ಕಲಿಗರ ಸಂಘದಲ್ಲಿ ಕೊಡಗನ್ನು ಕೊಡಗಿನವರೇ ಪ್ರತಿನಿಧಿಸುವಂತಾಗಲಿ. ಬೇರೆ ಆಕಾಂಕ್ಷಿಗಳಿದ್ದರೆ ಸಮಾಜದ ಮುಖಂಡರು ಸಂಧಾನ ಸಭೆ ನಡೆಸುವ ಮೂಲಕ ಒಮ್ಮತದ ಅಭ್ಯರ್ಥಿಯನ್ನು ರಾಜ್ಯಕ್ಕೆ ಕಳುಹಿಸಲಿ ಎಂಬ ಅಭಿಪ್ರಾಯಗಳು ಕೇಳಿಬಂದವು.

ಕಳೆದ ಚುನಾವಣೆಯಲ್ಲಿ ಅರಕಲಗೂಡಿನ ಶಾಸಕರಾಗಿದ್ದ, ಸೋಮವಾರಪೇಟೆಯ ಸಂಬAಧ ಹೊಂದಿರುವ ಎ. ಮಂಜು, ಹಾಸನದಲ್ಲಿ ಪೈಂಟ್ ಅಂಗಡಿ ಇಟ್ಟುಕೊಂಡಿರುವ, ಪಟ್ಟಣ ಸಮೀಪದ ಹೊನ್ನವಳ್ಳಿ ಗ್ರಾಮದ ನಂಟು ಹೊಂದಿರುವ ಹೆಚ್.ಕೆ. ಶೇಖರ್, ಹರಪಳ್ಳಿ ರವೀಂದ್ರ, ಹೈಕೋರ್ಟ್ ವಕೀಲ ಸಂದೀಪ್ ಅವರುಗಳು ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಶೇಖರ್ ಅವರು ಜಯಗಳಿಸುವ ಮೂಲಕ ಕೊಡಗು ಜಿಲ್ಲೆಯನ್ನು ರಾಜ್ಯದಲ್ಲಿ ಪ್ರತಿನಿಧಿಸಿದ್ದರು.

ಇದೀಗ ಆಡಳಿತ ಮಂಡಳಿ ಅವಧಿಯ ನಂತರ ಆಡಳಿತಾಧಿಕಾರಿಯ ನೇಮಕವಾಗಿದ್ದು, ಮೇ ತಿಂಗಳಿನಲ್ಲಿ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಕೊಡಗಿನಲ್ಲಿ ಗೌಡ ಸಮುದಾಯ ಬಾಂಧವರು ಅಧಿಕ ಸಂಖ್ಯೆಯಲ್ಲಿದ್ದು, ಉತ್ತರ ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದಲ್ಲಿ ೧೫ ಸಾವಿರಕ್ಕೂ ಅಧಿಕ ಮಂದಿ ಸದಸ್ಯತ್ವ ಪಡೆದಿದ್ದು, ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ.

ಕಳೆದ ಸಾಲಿನ ಚುನಾವಣೆವರೆಗೂ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಡೆಯುವದೇ ತಿಳಿಯುತ್ತಿರಲಿಲ್ಲ. ಆದರೆ ಶೇಖರ್ ಮತ್ತು ಎ. ಮಂಜು ಅವರ ಎಂಟ್ರಿಯಿAದಾಗಿ ಒಕ್ಕಲಿಗರ ಸಂಘದ ಚುನಾವಣೆ ಕೊಡಗಿನಲ್ಲೂ ಹವಾ ಎಬ್ಬಿಸಿತ್ತು. ಯಾವ ವಿಧಾನ ಸಭಾ ಚುನಾವಣೆಗೂ ಕಡಿಮೆ ಇಲ್ಲ ಎಂಬಷ್ಟರ ಮಟ್ಟಿಗೆ ಚುನಾವಣಾ ಅಖಾಡ ಬಿಸಿಯೇರಿತ್ತು.

ಹರಪಳ್ಳಿ ರವೀಂದ್ರ ಅವರು ಕಳೆದ ಸಾಲಿನ ಚುನಾವಣೆಯಲ್ಲಿ, ಅಂತಿಮ ಕ್ಷಣದಲ್ಲಿ ಚುನಾವಣಾ ಅಖಾಡಕ್ಕಿಳಿದು ಸೋಲನುಭವಿಸಿದ್ದು, ಈ ಬಾರಿ ಭರ್ಜರಿ ತಯಾರಿಯೊಂದಿಗೆ ಸಿದ್ಧತೆ ಕೈಗೊಂಡಿದ್ದಾರೆ.

ಇದೀಗ ಮತ್ತೆ ಚುನಾವಣೆ ಎದುರಾಗುತ್ತಿದ್ದು, ರೆಸಾರ್ಟ್ನಲ್ಲಿ ಹಿತೈಷಿಗಳ ಸಭೆ ಕರೆದು ಚುನಾವಣಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಗೌಡ ಸಮುದಾಯದ ಹಲವಷ್ಟು ಮುಖಂಡರು, ಹಾಲಿ-ಮಾಜೀ ಜನಪ್ರತಿನಿಧಿಗಳು, ಮಡಿಕೇರಿ-ವೀರಾಜಪೇಟೆ ಭಾಗದ ಗೌಡ ಸಮಾಜಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಈ ಬಾರಿ ರಾಜ್ಯ ಒಕ್ಕಲಿಗರ ಸಂಘದಲ್ಲಿ ಕೊಡಗಿನವರು ಪ್ರಾತಿನಿಧ್ಯ ಪಡೆಯಬೇಕೆಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ.

ಒಟ್ಟಾರೆ ಒಕ್ಕಲಿಗರ ಸಂಘದ ಚುನಾವಣಾ ಕಣ ರಂಗೇರಲಾರAಭಿಸಿದೆ. ಹರಪಳ್ಳಿ ರವೀಂದ್ರ ಅವರನ್ನು ಅವಿರೋಧವಾಗಿ ಆಯ್ಕೆಮಾಡಬೇಕು ಎಂದು ಸಮಾಜದ ಕೆಲ ಮುಖಂಡರು ಅಭಿಪ್ರಾಯಿಸುತ್ತಿದ್ದು, ಅವಿರೋಧ ಆಯ್ಕೆ ನಡೆಯುತ್ತದೆಯೇ? ಅಥವಾ ಚುನಾವಣೆಗೆ ವೇದಿಕೆ ಸಿದ್ಧಗೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.