ವೀರಾಜಪೇಟೆ, ಮಾ. ೧೯: ಆದಿವಾಸಿ ಜನಾಂಗಕ್ಕೆ ವಸತಿ ಸೌಲಭ್ಯ ಒದಗಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ಹೋರಾಟ ಸಮಿತಿಯ ವತಿಯಿಂದ ಇಲ್ಲಿನ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ವೀರಾಜಪೇಟೆಯ ಗಡಿಯಾರ ಕಂಬದ ಬಳಿಯಿಂದ ಮಿನಿವಿಧಾನಸೌಧದವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಕಾರರು ತಹಶೀಲ್ದಾರ್ ಯೋಗಾನಂದ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಾಯಮುಡಿ ರಮೇಶ್, ಆದಿವಾಸಿ ಸಮುದಾಯಕ್ಕೆ ವಸತಿ ಸೌಲಭ್ಯವನ್ನು ಒದಗಿಸಿಕೊಡುವ ಉದ್ದೇಶದಿಂದ ಲೈನ್ ಮನೆಯಲ್ಲಿ ವಾಸವಿರುವ ಸಮುದಾಯ ಕುಟುಂಬಗಳ ಸಮೀಕ್ಷೆಯನ್ನು ಸರಕಾರ ಎರಡು ವರ್ಷಗಳ ಹಿಂದೆ ನಡೆಸಿತ್ತು.
ಆದರೆ ಸಮೀಕ್ಷೆಯು ಕೇವಲ ಕಾಟಚಾರಕ್ಕಾಗಿ ನಡೆದಿದ್ದು, ಅರ್ಧದಷ್ಟು ಕುಟುಂಬಗಳು ಸಮೀಕ್ಷೆಯಿಂದ ಬಿಟ್ಟು ಹೋಗಿದೆ. ಆದ್ದರಿಂದ ೩ ತಿಂಗಳೊಳಗೆ ಮರು ಸಮೀಕ್ಷೆಯನ್ನು ನಡೆಸಬೇಕು. ಸಮುದಾಯದ ಕುಟುಂಬಗಳಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಸೂಕ್ತ ದಾಖಲೆಗಳನ್ನು ಒದಗಿಸಿಕೊಡಬೇಕು.
ಇದರೊಂದಿಗೆ ಕೆದಮುಳ್ಳೂರು ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಎಂಬಲ್ಲಿರುವ ಸಮುದಾಯದ ೫೯ ಕುಟುಂಬಗಳಿಗೆ ಸೂಕ್ತ ಕುಡಿಯುವ ನೀರು ಹಾಗೂ ಬೀದಿ ದೀಪದ ವ್ಯವಸ್ಥೆ ಮಾಡಬೇಕು. ತೆರ್ಮೆಕಾಡು ಪೈಸಾರಿಯಲ್ಲಿರುವ ಸುಮಾರು ೫೧ ಕುಟುಂಬಗಳಿಗೆ ಸಾಗುವಳಿ ಪತ್ರ ನೀಡಬೇಕು. ಪೊನ್ನಂಪೇಟೆ ತಾಲೂಕಿನಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ನೀಡುವ ಪರಿಹಾರ ಮೊತ್ತವನ್ನು ರೂ. ೨೫ ಲಕ್ಷಗಳಿಗೆ ಏರಿಸಬೇಕು ಹಾಗೂ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು. ವೀರಾಜಪೇಟೆಯ ಸರಕಾರಿ ಆಸ್ಪತ್ರೆಯನ್ನು ಮಡಿಕೇರಿಯಂತೆ ವೈದ್ಯಕೀಯ ಮಹಾವಿದ್ಯಾಲಯದ ಅಧೀನಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯ ವಿ.ಆರ್. ರಜನಿಕಾಂತ್, ಬಾರಿಕಾಡು ಪೈಸಾರಿಯ ಬೋಜ, ರಘು, ತೆರ್ಮೆಕಾಡು ಪೈಸಾರಿಯ ನಾಗೇಶ್, ಗೀತಾ, ರಮ್ಯಾ, ಸುಮಿತ, ಶಾಂತಿ ಮತ್ತಿತರರು ಇದ್ದರು.