ಪೊನ್ನಂಪೇಟೆ, ಮಾ. ೧೯: ಕೋವಿಡ್-೧೯ರ ರೂಪಾಂತರ ಮತ್ತು ಅದರ ೨ನೇ ಅಲೆಯ ನಿಯಂತ್ರಣದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರದ ಸೂಚನೆಯಂತೆ ಗಡಿಪ್ರದೇಶದಲ್ಲಿ ತಪಾಸಣೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಆದರೆ ಜನರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೆ ದಿನನಿತ್ಯ ಸಂಚರಿಸುತ್ತಿದ್ದು, ಕೋವಿಡ್-೧೯ರ ನಕಲಿ ನೆಗೆಟಿವ್ ಸರ್ಟಿಫಿಕೇಟ್ ಗಳನ್ನು ಬಳಸಿ ಗಡಿ ಪ್ರವೇಶಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಸಲಿಯನ್ನೂ ನಾಚಿಸುವ ನಕಲಿ ಸರ್ಟಿಫಿಕೇಟ್ ಗಳನ್ನು ಪತ್ತೆ ಹಚ್ಚುವುದೇ ಗಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬಹುದೊಡ್ಡ ಸವಾಲಾಗಿದೆ.
ಕೋವಿಡ್ ಭೀತಿಯಿಂದಾಗಿ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲ ಗಡಿಪ್ರದೇಶಗಳಲ್ಲಿ ಆರೋಗ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ತಂಡ ಶಿಫ್ಟ್ ಆಧಾರದಲ್ಲಿ ದಿನದ ೨೪ ಗಂಟೆ ಕಾರ್ಯನಿರ್ವಹಿಸುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಮತ್ತು ತಹಶೀಲ್ದಾರ್ ಅವರ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಈ ತಪಾಸಣೆಯಲ್ಲಿ ಕಳೆದ ೭೨ ಗಂಟೆಗಳ ಹಿಂದಿನ ಕೋವಿಡ್ ನೆಗೆಟಿವ್ ವರದಿಯ ಅಧಿಕೃತ ಸರ್ಟಿಫಿಕೇಟ್ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ವಾಹನಗಳಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಈ ನಿಯಮ ಅನ್ವಯವಾಗುತ್ತದೆ. ಆದರೆ ಕೆಲವರು ನೆಗೆಟಿವ್ ರಿಪೋರ್ಟ್ಗಳನ್ನು ಕಂಪ್ಯೂಟರ್ನಲ್ಲಿ ತಿದ್ದುಪಡಿಗೊಳಿಸಿ ಹೆಸರು ಮತ್ತು ವಿಳಾಸ ಬದಲಿಸಿ ಮುದ್ರಿಸಿಕೊಂಡು ತಂದು ತಪಾಸಣೆ ವೇಳೆ ಹಾಜರುಪಡಿಸಿ ಕೊಡಗು ಜಿಲ್ಲೆಗೆ ಕೊಡಗು-ಕೇರಳ ಗಡಿಯ ಮಾಕುಟ್ಟದ ಮೂಲಕ ಬರುತ್ತಿದ್ದಾರೆ.
ಈ ರೀತಿಯ ಪ್ರಕರಣಗಳು ಪ್ರತಿದಿನ ಪತ್ತೆಯಾಗುತ್ತಿದೆ. ಕೆಲವು ನಕಲಿ ಸರ್ಟಿಫಿಕೇಟುಗಳು ಅಸಲಿಯಂತೆಯೇ ಇರುವುದರಿಂದ ಸಿಬ್ಬಂದಿಗಳಿಗೂ ಕೂಡ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದರಿಂದ ತಪಾಸಣೆ ಸಂದರ್ಭ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಗಡಿ ಪ್ರವೇಶಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೆ ಕೆಲವು ಬುದ್ಧಿವಂತರು ಕೂಟುಹೊಳೆ ಸೇತುವೆ ಬಳಿಯಿಂದ ಕಾಲ್ನಡಿಗೆಯಲ್ಲಿ ಅಡ್ಡಲಾಗಿ ರಸ್ತೆ ದಾಟಿ ಸಿಬ್ಬಂದಿಗಳ ಕಣ್ಣುತಪ್ಪಿಸಿಕೊಂಡು ಒಳಬರುತ್ತಿದ್ದಾರೆ. ತಪಾಸಣೆ ಕೇಂದ್ರದ ಹಿಂದಿನಿAದ ಕಾಲ್ನಡಿಗೆಯಲ್ಲಿ ನುಸುಳಿಕೊಂಡು ರಸ್ತೆಗೆ ಬಂದು ವಾಹನಗಳನ್ನು ಹತ್ತಿಕೊಂಡು ವೀರಾಜಪೇಟೆಯತ್ತ ಬರುತ್ತಿದ್ದಾರೆ. ಇದಕ್ಕಾಗಿಯೇ ಕೆಲವು ವಾಹನಗಳು ಸಿದ್ಧವಾಗಿರುತ್ತದೆ. ಈ ರೀತಿಯ ಹಲವಾರು ಪ್ರಕರಣಗಳ ಪೈಕಿ ಒಂದೆರಡು ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ನಕಲಿ ಸರ್ಟಿಫಿಕೇಟ್ ದಂಧೆಯಲ್ಲಿ ಕೇವಲ ಕೇರಳಿಗರು ಮಾತ್ರವಲ್ಲದೆ, ಜಿಲ್ಲೆಯಿಂದ ಸಂಚರಿಸಿ ಕೇರಳದಿಂದ ವಾಪಸು ಬರುವ ಕೊಡಗಿನವರು ಕೂಡ ಭಾಗಿಯಾಗುತ್ತಿದ್ದಾರೆ. ಹಣ ನೀಡಿ ಕೋವಿಡ್ ಪರೀಕ್ಷೆಯನ್ನು ಮಾಡದೆ ನಿಯಮವನ್ನು ಉಲ್ಲಂಘಿಸಿ ಸುಲಭವಾಗಿ ಕೊಡಗಿಗೆ ಪ್ರವೇಶಿಸುತ್ತಿರುವ ಸ್ಥಳೀಯರ ಸಂಖ್ಯೆಗೇನು ಕೊರತೆಯಿಲ್ಲ.
ಯಾವುದೇ ಅಧಿಕೃತ ಸರ್ಟಿಫಿಕೇಟ್ ಇಲ್ಲದೆ ಹಗಲಿನಲ್ಲಿ ವಾಹನಗಳಲ್ಲಿ ಬರುವ ಜನರಿಗೆ ಗಡಿ ಪ್ರವೇಶಿಸಲು ಅವಕಾಶ ನಿರಾಕರಿಸಲಾಗುತ್ತಿದೆ. ಇದರಿಂದ ಗಡಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದೆ.ಈ ರೀತಿ ದೃಶ್ಯ ಗುರುವಾರದಂದು ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಗೆ ಕಂಡುಬAತು. ಕೆಲವರು ರಾತ್ರಿವರೆಗೂ ಸ್ಥಳದಲ್ಲೇ ಕಾದು ನಂತರ ರಾತ್ರಿ ವೇಳೆ ಸಿಬ್ಬಂದಿಗಳ ‘ಕೈ ಬಿಸಿ’ಮಾಡಿಕೊಂಡು ಜಿಲ್ಲೆಗೆ ಬರುತ್ತಿದ್ದಾರೆ ಎಂಬ ಶಂಕೆಯೂ ದಟ್ಟವಾಗತೊಡಗಿದೆ.
ನಕಲಿ ಸರ್ಟಿಫಿಕೇಟ್ಗಳ ಹಾವಳಿಯನ್ನು ನಿಯಂತ್ರಿಸಬೇಕಾದರೆ ಗಡಿಯಲ್ಲಿ ತಪಾಸಣೆ ಕ್ರಮಗಳನ್ನು ಆಧುನಿಕರಣಗೊಳಿಸಬೇಕಿದೆ. ‘ಬಾರ್ ಕೋಡ್ ಸ್ಕಾö್ಯನಿಂಗ್’ ವ್ಯವಸ್ಥೆಯಿಂದ ಮಾತ್ರ ನಕಲಿ ಸರ್ಟಿಫಿಕೇಟ್ ಹಾವಳಿ ತಡೆಗಟ್ಟಬಹುದಾಗಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
-ರಫೀಕ್ ತೂಚಮಕೇರಿ