ನಾಪೋಕ್ಲು, ಮಾ. ೧೯: ಇಲ್ಲಿಗೆ ಸಮೀಪದ ಹಳೆತಾಲೂಕು ಭಗವತಿ ದೇವಾಲಯದಲ್ಲಿ ವಾರ್ಷಿಕ ಹಬ್ಬದ ಪ್ರಯುಕ್ತ ಪಟ್ಟಣಿ ಹಬ್ಬವು ಶುಕ್ರವಾರ ವಿಜೃಂಭಣೆಯಿAದ ನಡೆಯಿತು. ದೇವಾಲಯದಲ್ಲಿ ಮೊದಲಿಗೆ ಸಂಪ್ರದಾಯಿಕ ಬೊಳ್‌ಕಾಟ್ ಕಾರ್ಯಕ್ರಮವು ಜರುಗಿತು. ನಂತರ ಗ್ರಾಮದ ಮೂರು ಕೇರಿಗಳಿಂದ ಎತ್ತುಪೋರಾಟ ಕಾರ್ಯಕ್ರಮದಂತೆ ದೇವಾಲಯದ ಮೂರು ಪ್ರದಕ್ಷಿಣೆ ಹಾಕಿ ದೇವರಿಗೆ ಹರಕೆಯನ್ನು ಒಪ್ಪಿಸಲಾಯಿತು.
ಕೇರಳದ ಚಂಡೆ ವಾದ್ಯದವರಿಂದ ಚಂಡೆ ಪ್ರದರ್ಶನ ನಡೆಯಿತು. ಈ ಸಂದರ್ಭ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ಮಾಡಲಾಯಿತು. ಶಿವಚಾಳಿಯಂಡ ವಿಜಯ ಕುಮಾರ್ ಅನ್ನದಾನ ಮಾಡಿದರು. ಬಳಿಕ ದೇವರ ನೃತ್ಯ ಪ್ರದರ್ಶನ ನಡೆಯಿತು. ತಾ. ೨೦ ರಂದು (ಇಂದು) ಪವಿತ್ರ ಕಾವೇರಿ ನದಿಯಲ್ಲಿ ದೇವರ ಜಳಕ ಕಾರ್ಯಕ್ರಮ ನಡೆಯಲಿದ್ದು, ತಾ. ೨೧ ರಂದು ಕಲಿಯಾಟ ಅಜ್ಜಪ್ಪ ಕೋಲ ಮತ್ತು ವಿಷ್ಣೂಮೂರ್ತಿ ಕೋಲಗಳು ನಡೆಯಲಿವೆ. ಅರ್ಚಕ ಹರೀಶ್ ಕೇಕುಣ್ಣಾಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ತಂತ್ರಿಗಳಾಗಿ ಪೇರೂರಿನ ಗಿರೀಶ್ ಕಾರ್ಯನಿರ್ವಹಿಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲೇಟಿರ ಮಾದಪ್ಪ,ಗೌರವ ಕಾರ್ಯದರ್ಶಿ ಅರೆಯಡ ಸೋಮಪ್ಪ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. -ದುಗ್ಗಳ