ಚೆಟ್ಟಳ್ಳಿ, ಮಾ. ೧೯: ಚೆಟ್ಟಳ್ಳಿಯ ಇತಿಹಾಸ ಪ್ರಸಿದ್ಧ ಈರಳೆ ಪೊವ್ವೊದಿ (ಭಗವತಿ) ದೇವಾಲಯದಲ್ಲಿ ತಾ. ೨೨ ರಂದು ದೇವಾಲಯ ರಸ್ತೆ ಉದ್ಘಾಟನೆ, ತೆರೆದ ಬಾವಿಗೆ ಭೂಮಿಪೂಜೆ ಹಾಗೂ ಭದ್ರಕಾಳಿ ಕಟ್ಟೆಯ ವಾಸ್ತುಪೂಜೆ, ದುರ್ಗಾ ಪೂಜೆ ನಡೆಯಲಿದೆ ಎಂದು ಈರಳೆ ಪೊವ್ವೊದಿ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೊರಿಮಂಡ ದಿನಮಣಿ ಪೂವಯ್ಯ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಅವರ ಅನುದಾನದಲ್ಲಿ ದೇವಾಲಯದ ಮುಖ್ಯದ್ವಾರದ ಕಾಂಕ್ರಿಟೀಕರಣಗೊAಡ ರಸ್ತೆಯನ್ನು ಬೆಳಿಗ್ಗೆ ೧೦.೩೦ಕ್ಕೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಪ್ಪ, ಕೊಡವ ನ್ಯಾಷನಲ್ ಕೌನ್ಸಿಲ್ನ ಅಧ್ಯಕ್ಷ ಎನ್.ಯು. ನಾಚಪ್ಪ ಭಾಗವಹಿಸಲಿರುವರು. ದೇವಾಯದ ದೇವತಾ ಕಾರ್ಯಕ್ಕೆ ಹಾಗೂ ಅಭಿಷೇಕಕ್ಕೆ ತೆರೆದ ಬಾವಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಿದೆ. ಪೂರ್ವಾಹ್ನ ೧೧ ಗಂಟೆಗೆ ಕೊಡವ ನ್ಯಾಷನಲ್ ಕೌನ್ಸಿಲ್ನ ಅಧ್ಯಕ್ಷ ಎನ್.ಯು. ನಾಚಪ್ಪ ಅವರಿಂದ ಕೊಡವ ಬುಡಕಟ್ಟು ಜನಾಂಗದ ಬಗ್ಗೆ ಭಾಷಣ ಮತ್ತು ಬೇಡಿಕೆಯ ಬಗ್ಗೆ ಹಕ್ಕೋತ್ತಾಯ ನಡೆಯಲಿದೆ.
ಸಂಜೆ ೬ಕ್ಕೆ ಪೊರಿಮಂಡ ಜಾಗದಲ್ಲಿರುವ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಭದ್ರಕಾಳಿ ಕಟ್ಟೆಯ ವಾಸ್ತುಪೂಜೆ, ದುರ್ಗಾಪೂಜೆ ನಡೆಯಲಿದೆ. ದೇವತಕ್ಕರಾದ ಬಲ್ಲಾರಂಡ ರಾಜಪ್ಪ, ಊರುತಕ್ಕರಾದ ಪೊರಿಮಂಡ ನಾಣಯ್ಯ, ದೇವಾಲಯ ಸಮಿತಿಯ ಮುಂದಾಳತ್ವದಲ್ಲಿ ನೆರವೇರಲಿದೆ.