ಮಡಿಕೇರಿ, ಮಾ. ೧೮: ಕೃಷಿ ತಂತ್ರ, ಗಾಂವ್ ಕನೆಕ್ಷನ್, ಮಡಿಕೇರಿ ಗ್ರೀನ್ ಸಿಟಿ ಫೋರಂ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ತಾ. ೨೦ ರಂದು ‘ಮಣ್ಣು ಪರೀಕ್ಷೆ ಮತ್ತು ಸ್ವಚ್ಛತೆ’ಯ ಬಗ್ಗೆ ಸೈಕಲ್ ಜಾಥಾ ಮತ್ತು ಸ್ಪರ್ಧೆ ನಡೆಯಲಿದೆ ಎಂದು ಗ್ರೀನ್ ಸಿಟಿ ಫೋರಂನ ಪ್ರಧಾನ ಕಾರ್ಯದರ್ಶಿ ಮಾದೇಟಿರ ತಿಮ್ಮಯ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಮ್ಮು ಕಾಶ್ಮೀರದಿಂದ ಕನ್ಯಕುಮಾರಿಯವರೆಗೆ ಕೃಷಿಕರಲ್ಲಿ ಮಣ್ಣು ಪರೀಕ್ಷೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ತಾ. ೩ ರಿಂದ ಸೈಕಲ್ ಜಾಥಾ ಆರಂಭವಾಗಿದೆ. ಕರ್ನಾಟಕದಲ್ಲೇ ಪ್ರಥಮ ಬಾರಿಗೆ ತಾ. ೨೦ ರಂದು (ನಾಳೆ) ಕೊಡಗು ಜಿಲ್ಲೆಯಲ್ಲಿ ಜಾಥಾ ನಡೆಯಲಿದೆ ಎಂದು ಹೇಳಿದ್ದಾರೆ.

ಅಂದು ಬೆಳಿಗ್ಗೆ ೭ ಗಂಟೆಗೆ ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಜಾಥಾದೊಂದಿಗೆ ಯುವಕ, ಯುವತಿಯರಿಗೆ ಹಾಗೂ ಮಕ್ಕಳ ವಿಭಾಗದಲ್ಲಿ ಪ್ರತ್ಯೇಕವಾಗಿ ಸೈಕ್ಲಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಆಕರ್ಷಕ ಬಹುಮಾನ ನೀಡಲಾಗುತ್ತದೆ.

ಯುವಕರಿಗೆ ೧೦ ಕಿ.ಮೀ., ಯುವತಿಯರಿಗೆ ೫ ಕಿ.ಮೀ. ಹಾಗೂ ಮಕ್ಕಳಿಗೆ ೩ ಕಿ.ಮೀ. ಸೈಕ್ಲಿಂಗ್ ಸ್ಪರ್ಧೆ ನಡೆಯಲಿದ್ದು, ಕೊಡಗಿನ ಕೃಷಿಕರಿಗೆ, ಯುವ ಸಮೂಹಕ್ಕೆ ಸೈಕಲ್ ಜಾಥಾ ಹಾಗೂ ಸ್ವಚ್ಛತಾ ಜಾಗೃತಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸೈಕ್ಲಿಂಗ್ ಸ್ಪರ್ಧೆಗೆ ಭಾಗವಹಿಸಲು ಆಸಕ್ತಿ ಹೊಂದಿರುವವರು ೯೪೮೨೧೦೬೦೦೪, ೯೬೨೦೭೦೯೯೮೯ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವAತೆ ತಿಮ್ಮಯ್ಯ ಮನವಿ ಮಾಡಿದ್ದಾರೆ.